ಗಂಗಾ ದಶಹರಾ - ಭಾಗಿರಥಿ ಜಯಂತೀ

ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ ಕೊಟ್ಟಿರುವ ಮಹತ್ವ ಬೇರಾವ ತೀರ್ಥಕ್ಕೂ ನದಿಗೂ ಇಲ್ಲ. ಗಂಗೆಯು ಸಾಕ್ಷಾತ್ ಮಹಾವಿಷ್ಣುವಿನ ಪಾದಮೂಲದಿಂದ ಜನಿಸಿ, ಚತುರ್ಮುಖನ ಕಮಂಡಲುವಿನಲ್ಲಿ ನೆಲೆಸಿ, ದೇವಲೋಕದಲ್ಲಿ ಸಂಚರಿಸಿ, ಮಹಾದೇವನ ಜಟಾಮೂಲದಿಂದ ಭುವಿಗೆ ಅವತರಿಸಿ, ದರ್ಶನ-ಸ್ಪರ್ಷ-ಸ್ಮರಣ ಮಾತ್ರದಿಂದ ಪಾಪಗಳನ್ನು ಪರಿಹರಿಸುವ ಮಹಾ ಸಾಮರ್ಥ್ಯವನ್ನು ಪಡೆದಿರುವ ಮಹಾನದಿ.

ಹಿಂದೂ ಧರ್ಮಾನುಯಾಯಿಯಾದ ಪ್ರತಿಯೊಬ್ಬನಿಗೂ ಇರುವ ಆಸೆ ಜೀವನದಲ್ಲಿ ಒಮ್ಮೆಯಾದರೂ ಗಂಗಾಸ್ನಾನ ಮಾಡುವುದು. ನಮ್ಮ ಧರ್ಮದ ಆಂತರಿಕ ಪ್ರಭೇದಗಳಾದ ವೈದಿಕ, ವೈಷ್ಣವ, ಶೈವ, ಶಾಕ್ತ, ಸೌರ, ಗಾಣಪತ್ಯ ಮೊದಲಾದ ಎಲ್ಲರಿಗೂ ಗಂಗೆ ಪರಮ ಪವಿತ್ರ. ಗಂಗಾಜಲವು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಇದ್ದೇ ಇರುತ್ತದೆ. ಕಾಶಿಯಲ್ಲಿ ಗಂಗಾಸ್ನಾನ ಮಾಡಿ ದೇಹ ತ್ಯಜಿಸಿದವರನ್ನು ಸಾಕ್ಷಾತ್ ರುದ್ರದೇವರೇ ತಾರಕ ಮಂತ್ರೋಪದೇಶ ಮಾಡಿ ಮೋಕ್ಷ ಮಾರ್ಗಕ್ಕೆ ಕೊಂಡೊಯ್ಯುತ್ತಾರೆಂದು ನಮ್ಮ ಪುರಾಣಗಳು ಸಾರುತ್ತವೆ.

ದರ್ಶನಾತ್ ಸ್ಪರ್ಷನಾತ್ ಪಾನಾತ್ ತಥಾ ಗಂಗೇತಿ ಕೀರ್ತನಾತ್ ।
ಪುನಾತಿ ಪುಣ್ಯಪುರುಷಾನ್ ಶತಶೋಽಥ ಸಹಸ್ರಶಃ ।।
(ಅಗ್ನಿಪುರಾಣ)
ದರ್ಶನದಿಂದ, ಸ್ಪರ್ಷದಿಂದ, ಪಾನದಿಂದ ಮತ್ತು ಗಂಗಾ-ಗಂಗಾ ಎಂದು ಸ್ಮರಣೆ ಮಾಡುವುದರಿಂದ, ಅಂತಹ ಪುಣ್ಯವಂತರಾದ ಪುರುಷರ ನೂರು, ಸಾವಿರಾರು ಪೂರ್ವಜರನ್ನು ಸಹ ಗಂಗೆಯು ಪಾವನಗೊಳಿಸುತ್ತಾಳೆ (ಉದ್ಧರಿಸುತ್ತಾಳೆ).

ಪ್ರತ್ಯಕ್ಷವಾಗಿ ಗಂಗೆಯ ಸಾನ್ನಿಧ್ಯ ದೊರಕದಿದ್ದರೂ, ಕೇವಲ ಗಂಗಾ-ಗಂಗಾ ಎಂದು ನಾಮಸ್ಮರಣೆಯನ್ನು ಮಾಡಿದರೂ ಗಂಗಾಸ್ನಾನ ಫಲ ದೊರಕುತ್ತದೆ.
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।।
(ಪದ್ಮಪುರಾಣ)
ನೂರಾರು ಯೋಜನಗಳಷ್ಟು ದೂರದಿಂದಲೂ, ಯಾರು ಗಂಗಾ-ಗಂಗಾ ಎಂದು ಸ್ಮರಣೆ ಮಾಡುತ್ತಾರೋ, ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.

ಗಂಗೆಯನ್ನು "ಸರ್ವತೀರ್ಥಮಯೀ", ಎಲ್ಲ ಪವಿತ್ರ ತೀರ್ಥಗಳನ್ನು ತನ್ನಲ್ಲಿ ಸಮಾಹಿಸಿಕೊಂಡವಳು ಎಂದು ಕರೆಯಲಾಗಿದೆ. ಗಂಗಾಸ್ನಾನ ದರ್ಶನ ಸ್ಮರಣೆಯಿಂದ ಎಲ್ಲ ತೀರ್ಥಗಳಲ್ಲಿ ಮಿಂದ ಫಲ ಬರುತ್ತದೆ. ಗಂಗಾನದಿಯ ಜಲವನ್ನು ಶಾಸ್ತ್ರಗಳಲ್ಲಿ ಬ್ರಹ್ಮದ್ರವ, ಧರ್ಮದ್ರವವೆಂದು ಕೊಂಡಾಡಲಾಗಿದೆ. ಆದ್ದರಿಂದ ಗಂಗಾನದಿಯು ಬ್ರಹ್ಮವಸ್ತುವಿನ ವಿಭೂತಿರೂಪಳೇ ಆಗಿರುತ್ತಾಳೆ.
ವಿಷ್ಣುಪಾದಾಬ್ಜ ಸಂಭೂತೇ ಗಂಗೇ ತ್ರಿಪಥಗಾಮಿನಿ । 
ಬ್ರಹ್ಮದ್ರವೇತಿ ವಿಖ್ಯಾತಾ ಪಾಪಂ ಮೇ ಹರ ಜಾಹ್ನವಿ ।।

ಮಹಾವಿಷ್ಣುವಿನ ಪಾದಪದ್ಮಗಳಿಂದ ಹುಟ್ಟಿ, ಬ್ರಹ್ಮದೇವನ ಕಮಂಡಲುವಿನಲ್ಲಿ ನೆಲೆಸಿರುವ ಕಾರಣ ಬ್ರಹ್ಮದ್ರವವೆಂದು ವಿಖ್ಯಾತಳಾದ, ಸ್ವರ್ಗ-ಭೂಮಿ-ಪಾತಾಳ ಹೀಗೆ ಮೂರು ಲೋಕಗಳಲ್ಲಿ ಸಂಚರಿಸುವ, ಜುಹ್ನು ಮಹರ್ಷಿಯ ಪುತ್ರಿಯಾದ ಗಂಗಾದೇವಿಯೇ ನನ್ನ ಸಮಸ್ತ ಪಾಪಗಳನ್ನು ನಾಶಮಾಡು.

ಗಂಗಾ ದಶಹರಾ - ಭಾಗೀರಥಿ ಜಯಂತೀ
ಸಮಸ್ತ ಲೊಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧಾರಕ್ಕಾಗಿ, ಪಾಪಗಳನ್ನು ಪರಿಹರಿಸುವದಕ್ಕಾಗಿ ಗಂಗಾದೇವಿಯು ಸ್ವರ್ಗದಿಂದ ಭೂಮಿಗೆ ಅವತರಿಸಿದ ಪುಣ್ಯದಿನವೇ ಗಂಗಾ ಜಯಂತೀ. ಇದನ್ನು ಗಂಗಾ ದಶಹರಾ, ಭಾಗೀರಥಿ ಜಯಂತೀ, ದಶಹರ ದಶಮೀ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಜ್ಯೇಷ್ಠಮಾಸ ಶುಕ್ಲಪಕ್ಷ ದಶಮೀ ತಿಥಿಯಂದು ಗಂಗಾ ದಶಹರಾ ಆಚರಿಸಲಾಗುತ್ತದೆ.
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠಮಾಸೇ ಬುಧೇಽಹನಿ ।
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ ।।
(ವರಾಹ ಪುರಾಣ)
ಜ್ಯೇಷ್ಠಮಾಸ, ಶುಕ್ಲಮಾಸ, ದಶಮೀ ತಿಥಿ, ಬುಧವಾರ, ಹಸ್ತಾ ನಕ್ಷತ್ರವಿರುವ ದಿನ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು.

ಗಂಗಾವತರಣ
ಗಂಗಾವತರಣ

ಈ ದಿವಸ ಗಂಗಾಪೂಜೆ, ಗಂಗಾವತರಣ ಕಥೆ ಮತ್ತು ಗಂಗಾ ಮಹಾತ್ಮೆಯನ್ನು ಶ್ರವಣ ಮಾಡುವುದರಿಂದ ಹತ್ತು ವಿಧವಾದ ಪಾಪಗಳು ನಾಶವಾಗುವುದರಿಂದ ಈ ದಶಮೀ ತಿಥಿಯನ್ನು "ದಶಹರಾ" ಎಂದು ಕರೆಯಲಾಗುತ್ತದೆ.  
ಜ್ಯೆಷ್ಠೇ ಮಾಸಿ ಸಿತೇ ಪಕ್ಷೇ ದಶಮೀ ಹಸ್ತಸಂಯುತಾ ।
ಹರತೇ ದಶ ಪಾಪಾನಿ ತಸ್ಮಾತ್ ದಶಹರಾ ಸ್ಮೃತಾ ।।
(ಬ್ರಹ್ಮಪುರಾಣ)
ಜ್ಯೇಷ್ಠಮಾಸ ಶುಕ್ಲಪಕ್ಷ ಹಸ್ತ ನಕ್ಷತ್ರದಿಂದ ಕೂಡಿದ ದಶಮೀ ತಿಥಿಯು ಹತ್ತು ವಿಧವಾದ ಪಾಪಗಳನ್ನು ಪರಿಹರಿಸುವುದರಿಂದ ಅದನ್ನು ದಶಹರಾ ಎಂದು ಕರೆಯಲಾಗುತ್ತದೆ.

ಹತ್ತುವಿಧವಾದ ಪಾಪಗಳು ಯಾವುವು- ಇವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಮೂರು ಪ್ರಕಾರದ್ದಾಗಿವೆ.
ಆದತ್ತಾನಾಮುಪಾದಾನಂ ಹಿಂಸಾ ಚೈವಾವಿಧಾನತಃ ।
ಪರದಾರೋಪಸೇವಾ ಚ ಶಾರೀರಂ ತ್ರಿವಿಧಂ ಸ್ಮೃತಮ್ ।।
ಪಾರುಷ್ಯಮನೃತಮ್ ಚೈವ ಪೈಶುನ್ಯಂ ಚಾಪಿ ಸರ್ವಶಃ ।
ಅಸಂಬದ್ಧ ಪ್ರಲಾಪಶ್ಚ ವಾಙ್ಮಯಂ ಸ್ಯಾತ್ ಚತುರ್ವಿಧಮ್ ।।
ಪರದ್ರವ್ಯೇಷ್ವಭಿಧ್ಯಾನಂ ಮನಸಾಽನಿಷ್ಟಚಿಂತನಂ ।
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ।। 
(ರಾಜಮಾರ್ತಾಂಡ, ಮನುಸ್ಮೃತಿ)
ತಾನು ಕೊಡದೇ ಇರುವ ದ್ರವ್ಯವನ್ನು ಕಿತ್ತುಕೊಳ್ಳುವುದು (ಮೋಸದಿಂದ ಪರರ ಸ್ವತ್ತನ್ನು ದೋಚುವುದು), ವಿನಾಕಾರಣ ಪರರಿಗೆ ಹಿಂಸೆಯನ್ನು ಮಾಡುವುದು, ಪರಸ್ತ್ರಿಯನ್ನು ಭೋಗಿಸುವುದು - ಇವು ಮೂರು ಕಾಯಿಕ (ಶಾರೀರಿಕ) ಪಾಪಗಳು.
ಕೆಟ್ಟದಾಗಿ ಮಾತನಾಡುವುದು, ಸುಳ್ಳು ಹೇಳುವುದು, ಚಾಡೀಖೋರತನ, ನಿಷ್ಪ್ರಯೋಜಕವಾದ ಅಸಂಬದ್ಧ ಮಾತುಗಳನ್ನಾಡುವುದು - ಇವು ನಾಲ್ಕು ವಾಚಿಕ ಪಾಪಗಳು.
ಪರದ್ರವ್ಯವನ್ನು ದೋಚುವ ಸಂಚು ಹಾಕುವುದು, ಇನ್ನೊಬ್ಬರ ಬಗ್ಗೆ ಮನಸ್ಸಿನಲ್ಲಿ ಅನಿಷ್ಟ-ಕೇಡು ಬಯಸುವುದು, ತನ್ನನ್ನು ಇತರರಿಗಿಂತ ಶ್ರೇಷ್ಠನೆಂದು ತಿಳಿದುಕೊಳ್ಳುವುದು - ಇವು ಮೂರು ಮಾನಸಿಕ ಪಾಪಗಳಾಗಿವೆ.

ಈ ನೀಚ ಕೃತ್ಯಗಳನ್ನು ಸರ್ವಥಾ ಮಾಡಬಾರದು, ಪ್ರಮಾದವಶಾತ್ ಇಂತಹ ಕೃತ್ಯ ನಡೆದದ್ದೇ ಆದರೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆಂದು ಮತ್ತೆ ಈ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಮೇಲ್ಕಂಡ ಇಂತಹ ಅತ್ಯಂತ ಹೇಯ ಮಹಾಪಾತಕಗಳನ್ನು ಶ್ರೀಹರಿಪಾದಾಬ್ಜಸಂಭೂತೆಯಾದ ಗಂಗೆಯು ಪರಿಹಾರಮಾಡುತ್ತಾಳೆ.  ಗಂಗಾ ಸೇವೆಯು ಪ್ರಾಯಶ್ಚಿತ್ತಕ್ಕೆ ಪರಮ ಸಾಧನ, ಸನ್ಮಾರ್ಗಕ್ಕೆ ಪರಮ ಸೋಪಾನ.

ಆಚರಣೆ -
ಈ ದಿನದಂದು ಗಂಗಾಸ್ನಾನವನ್ನು ವಿಧಿಸಲಾಗಿದೆ. ಗಂಗಾಸ್ನಾನ ಪ್ರತ್ಯಕ್ಷ ಸಾಧ್ಯವಿರದಿದ್ದಾಗ ಯಥಾ ಉಪಲಬ್ಧವಾದ ನೀರಿನಲ್ಲಿಯೆ ಗಂಗಾದೇವಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಗಂಗಾಸ್ಮರಣಪೂರ್ವಕ ಸ್ನಾನವನ್ನು ಮಾಡಬಹುದು.
ಗಂಗಾಕಲಶವನ್ನು ಯಥಾಶಕ್ತಿ (ಪುರೋಹಿತರ ಮುಖಾಂತರ ವಿಧಾನೋಕ್ತ-ಶಾಸ್ತ್ರೋಕ್ತವಾಗಿ) ಷೋಡಶೋಪಚಾರಗಳಿಂದ ಪೂಜಿಸಬೇಕು. ಗಂಗಾ ದಶಹರಾದಂದು ವಿಶೇಷವಾಗಿ ಪಠಿಸಲಾಗುವ "ಗಂಗಾ ದಶಹರಾ ಸ್ತೋತ್ರ"ವನ್ನು ಪಠಿಸಬೇಕು. ಗಂಗಾವತರಣದ ಕಥೆಯನ್ನು ಶ್ರವಣ ಮಾಡಬೇಕು. ಗಂಗಾದೇವಿಗೆ ಹಾಲಿನಿಂದ ಅರ್ಘ್ಯವನ್ನು ಸಮರ್ಪಿಸಬೆಕು. ಪ್ರವಹಿಸುವ ಜಲದಲ್ಲಿ ದೀಪದಾನವನ್ನು ಮಾಡಬೇಕು.
ಈ ಉತ್ಸವವನ್ನು ಉತ್ತರ ಭಾರತದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಗಂಗಾತೀರದ ಪುಣ್ಯಕ್ಷೇತ್ರಗಳಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು ಮಾಡಲಾಗುತ್ತದೆ.

ಗಂಗಾ ಪ್ರಾರ್ಥನೆ -
ನಮಾಮಿ ಗಂಗೇ ತವ ಪಾದಪಂಕಜಂ
ಸುರಾಸುರೈರ್ವಂದಿತ ದಿವ್ಯರೂಪಮ್ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವಾನುಸಾರೇಣ ಸದಾ ನರಾಣಾಮ್ ।।
ನಮಸ್ತೇ ಪಾಪಸಂಹತ್ರೇ ಹರಮೌಲಿವಿರಾಜಿತೇ
ನಮಸ್ತೇ ಸರ್ವಲೋಕಾನಾಂ ಹಿತಾಯ ಧರಣೀಗತೇ ।
ಸ್ವರ್ಗಾಪವರ್ಗದೇ ದೇವಿ ಗಂಗೇ ಪತಿತಪಾವನಿ
ತ್ವಾಮಹಂ ಶರಣಂ ಯಾತಃ ಪ್ರಸನ್ನಾ ಮಾಂ ಸಮುದ್ಧರ ।।
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ ।
ದರ್ಮದ್ರವೇತಿ ವಿಖ್ಯಾತೇ ಪಾಪಂ ಮೇ ಹರ ಜಾಹ್ನವಿ ।।
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।।


ದಶಹರಾ ದಶಯೋಗ -
ಜ್ಯೇಷ್ಠಮಾಸ, ಶುಕ್ಲಪಕ್ಷ, ದಶಮೀ ತಿಥಿ, ಬುಧವಾರ, ಹಸ್ತ ನಕ್ಷತ್ರ, ವ್ಯತೀಪಾತ ಯೋಗ, ಗರ ಕರಣ, ಆನಂದ ಯೋಗ, ಕನ್ಯಾರಾಶಿಯಲ್ಲಿ ಚಂದ್ರ, ವೃಷಭರಾಶಿಯಲ್ಲಿ ರವಿ - ಹೀಗೆ ಹತ್ತು ಯೋಗಗಳು ಕೂಡಿ ಬಂದರೆ ಅದನ್ನು ದಶಯೋಗವೆಂದು ಕರೆಯುತ್ತಾರೆ. ಇದು ಮಹಾಪುಣ್ಯಪ್ರದವಾದ ಯೋಗವಾಗಿರುತ್ತದೆ. ಪ್ರತಿ ಬಾರಿ ಜ್ಯೇಷ್ಠ ಶುದ್ಧ ದಶಮೀಯಂದು ಈ ಎಲ್ಲವು ಇರುವ ಯೋಗ ಉಂಟಾಗುವುದಿಲ್ಲ. ಆದರೆ ಹತ್ತರ ಪೈಕಿ ಎಷ್ಟು ಹೆಚ್ಚು ಯೋಗಗಳು ಕೂಡಿ ಬರುವವೋ ಅಷ್ಟು ಹೆಚ್ಚಿನ ಮಹತ್ವವಿರುತ್ತದೆ.
ಜೂನ್ 4ನೇ ತಾರೀಖು ರವಿವಾರ ಜ್ಯೇಷ್ಠ ಶುದ್ಧ ದಶಮೀ ಇದ್ದು ಅಂದು ಹಸ್ತ ನಕ್ಷತ್ರ, ವ್ಯತೀಪಾತ ಯೋಗ, ಗರ ಕರಣ, ಕನ್ಯಾಚಂದ್ರ, ವೃಷಭ ರವಿ ಹೀಗೆ ಉತ್ತಮವಾದ ಯೋಗವಿರುತ್ತದೆ. ಈ ದಿನದಂದೇ ಗಂಗಾ ದಶಹರಾ ಅಥವಾ ಭಾಗೀರಥಿ ಜಯಂತಿಯನ್ನು ಆಚರಿಸಲಾಗುವುದು.   

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆಗಳು.