ಅಕ್ಷಯ ತೃತೀಯಾ

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗುತ್ತದೆ. ಯಾವ ದಿನ ಏನೇ ಶುಭ ಕಾರ್ಯಗಳನ್ನು ಮಾಡಿದರೂ ಅದು ಅಕ್ಷಯಫಲವನ್ನು ತಂದುಕೊಡುವುದೋ ಅಂತಹ ಮಹಾಮುಹೂರ್ತ ಅಕ್ಷಯ ತೃತೀಯಾ. ಇದು ಸಾಡೇ ತೀನ್ ಮುಹೂರ್ತಗಳಲ್ಲೊಂದು. ಈ ಶುಭ ಮುಹೂರ್ತಗಳಲ್ಲಿ ದಿನಶುದ್ಧಿ, ವಾರಶುದ್ಧಿ, ನಕ್ಷತ್ರಶುದ್ಧಿ  ಮೊದಲಾದ ಪಂಚಾಂಗಶುದ್ಧಿಗಳನ್ನು ನೋಡುವ ಅವಶ್ಯಕತೆ ಇಲ್ಲ. ಈ ಮುಹೂರ್ತಗಳು ಸ್ವಯಂಸಿದ್ಧಗಳಾದುದರಿಂದ ಎಲ್ಲ ಶುಭಕಾರ್ಯಗಳಿಗೆ ಪ್ರಶಸ್ತವಾಗಿವೆ. ಈ ದಿನದಂದು ಹೊಸ ವ್ಯಾಪಾರ ಆರಂಭ, ಗ್ರಹ ನಿರ್ಮಾಣ ಆರಂಭ, ಮೂರ್ತಿ ಪ್ರತಿಷ್ಠಾಪನೆ, ವಿವಾಹ (ಕನ್ಯಾದಾನ ಅಕ್ಷಯಫಲ), ಉಪನಯನಗಳನ್ನು ಸಹ ಮಾಡಬಹುದಾಗಿದೆ. ಈ ದಿನದಂದು ಹೊಸ ವಾಹನ, ಉಪಕರಣಗಳು, ವಸ್ತ್ರ, ಆಭರಣಗಳು ಮೊದಲಾದವುಗಳ ಖರೀದಿ ಶುಭ ಮತ್ತು ಅಭಿವೃದ್ಧಿಪ್ರದವಾಗಿರುತ್ತದೆ.

ಇಂದಿನ ದಿನಗಳಲ್ಲಿ ಅಕ್ಷಯ ತೃತೀಯಾ ಎಂದರೆ ದುಬಾರಿ ವಸ್ತುಗಳನ್ನು ಕೊಂಡುಕೊಳ್ಳುವ ವಿಶೇಷವಾಗಿ ಚಿನ್ನ ಖರೀದಿಮಾಡುವ ಹಬ್ಬವಾಗಿಬಿಟ್ಟಿದೆ. ಪತ್ರಿಕೆಗಳು, ಟಿವಿ, ಅಂತರ್ಜಾಲ, ಜಾಹಿರಾತು ಹೋರ್ಡಿಂಗ್‍ಗಳು ಎಲ್ಲಿ ನೋಡಿದರೂ ಚಿನ್ನ ಖರೀದಿಯ ಜಾಹಿರಾತುಗಳೇ. ಧರ್ಮಾಚರಣೆ-ವ್ರತಾಚರಣೆಗಳ ವ್ಯಾಪಾರೀಕರಣ ಹೊಸ ಶತಮಾನದ ದುಷ್ಟ ಬೆಳವಣಿಗೆಗಳಲ್ಲಿ ಒಂದು. ವ್ರತ-ಹಬ್ಬಗಳು ಶ್ರೀಮಂತರ ಮತ್ತು ದಿಖಾವೇ ಖೋರರ ಸ್ವತ್ತುಗಳಾಗುತ್ತಿವೆ. ಹಬ್ಬಗಳು ಕೇವಲ ಅಂಗಡಿಗಳಲ್ಲಿ ವಸ್ತುಗಳ ಖರೀದಿಗಾಗಿ ಮಾತ್ರ ಇವೆಯೇನೋ ಅನಿಸುವಂತಹ ಸ್ಥಿತಿಯುಂಟಾಗಿದೆ. ಧರ್ಮದ ಜಾಡಿನಲ್ಲಿ ಪಾಶ್ಚಾತ್ಯ ಗ್ರಾಹಕ ಸಂಸ್ಕೃತಿ ನಮ್ಮ ಜೀವನದಲ್ಲಿ ತನ್ನ ತಲೆ ತೂರಿಸುತ್ತಿದೆ. ಈ ದಿನ ಏನನ್ನಾದರೂ ಖರೀದಿ ಮಾಡಲೇಬೇಕು ಇಲ್ಲವಾದರೆ ಹಬ್ಬದ ಆಚರಿಸಂತಯೇ ಅಲ್ಲ ಎಂದು ಜನ ತಿಳಿದಿದ್ದಾರೆ. ನಮ್ಮ ಧರ್ಮ ಡಾಂಭಿಕರ ಮತ್ತು ವ್ಯಾಪಾರೀ ಸಂಸ್ಕೃತಿಯ ಗುಲಾಮವಾಗುತ್ತಿದೆ.

ಶಾಸ್ತ್ರಗಳ ಪ್ರಕಾರ ಯಾವ ದಿವಸ ಏನನ್ನಾದರೂ ದಾನಮಾಡುವುದರಿಂದ ನಮಗೆ ಇಹಪರದಲ್ಲಿ ಎಲ್ಲವೂ ಅಕ್ಷಯವಾಗಿ ಪ್ರಾಪ್ತವಾಗುವುದೋ ಅಂತಹ ಶ್ರೇಷ್ಠ ದಿವಸ ಅಕ್ಷಯ ತೃತೀಯಾ. ಆ ದಿನ ದುಬಾರಿ ವಸ್ತುಗಳನ್ನು ಖರಿದಿಸಿ ಮನೆಯಲ್ಲಿ ಕೂಡಿಹಾಕುವುದಲ್ಲ ಬದಲು ದಾನಾದಿಗಳನ್ನು ಮಾಡುವುದು ಶಾಸ್ತ್ರ ನಿರ್ದೇಶ. ಕೆಲವರು ಈ ದಿನ ಏನನ್ನಾದರೂ ಇತರರಿಗೆ ಕೊಟ್ಟರೆ ಅದರಿಂದ ತಾವು ಇರುವುದನ್ನೂ ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆಗಳನ್ನಿಟ್ಟುಕೊಂಡಿದ್ದಾರೆ, ಹೀಗೆ ಉಪದೇಶ ಮಾಡುವವರೂ ಇದ್ದಾರೆ. ಇದು ಶುದ್ಧ ಮೂರ್ಖ ಕಲ್ಪನೆ, ನಿರಾಧಾರ. ಮಹಾಲಕ್ಷ್ಮಿಯು ಕೇವಲ ಚಿನ್ನದಲ್ಲಿಯೇ ನೆಲೆಸಿದ್ದಾಳೆ ಆದ್ದರಿಂದ ಅದನ್ನು ಖರಿದೀ ಮಾಡಿದರೆ ಮನೆಗೆ ಲಕ್ಷ್ಮೀಯ ಆಗಮನವಾಗುತ್ತದೆ ಎಂಬ ಒಂದು ಜನಪ್ರೀಯ ನಂಬಿಕೆ. ಇದೂ ಸಹ ಅರ್ಧಸತ್ಯ. ಚಿನ್ನವು ಶುದ್ಧತೆಯ ಮತ್ತು ಸಾತ್ವಿಕತೆಯ ಸಂಕೇತ ಅದಕ್ಕಾಗಿ ಅಲ್ಲಿ ಲಕ್ಷ್ಮೀನಿವಾಸ. ಶುದ್ಧತೆ, ಸಾತ್ವಿಕತೆ, ಧಾರ್ಮಿಕತೆ ಎಲ್ಲಿ ಇರುವುದೋ ಅಲ್ಲಿ ಸ್ವಾಭಾವಿಕವಾಗಿ ಲಕ್ಕ್ಷ್ಮೀಯ ವಾಸವಿರುತ್ತದೆ, ಚಿನ್ನವೇ ಬೇಕೆಂದೆನಿಲ್ಲ. ಸ್ವಾರ್ಥಬುದ್ಧಿ, ಅಧರ್ಮ, ಅಶುದ್ಧಾಚರಣೆಗಳಿರುವವರು ಎಷ್ಟು ಚಿನ್ನ-ಬೆಳ್ಳಿ ಸಂಗ್ರಹಿಸಿದರೇನು ಅಲ್ಲಿ ಲಕ್ಷ್ಮೀವಾಸ ಇರುವುದಿಲ್ಲ. ಅಲ್ಲಿ ಇರುವುದು  ಅಲಕ್ಷ್ಮೀಯ ವಾಸ ಇದು ಅನರ್ಥವನ್ನೇ ತಂದುಕೊಡುವಂಥಾದ್ದು. ಭೌತಿಕವಾದ ಎಲ್ಲ ಸಂಪತ್ತು-ಸುಖವಿದೆ, ಆಸ್ತಿ-ಕಾರು-ಬಂಗೆಲೆ-ಆಳು ಎಲ್ಲ ಇದೆ ಆದರೆ ಏನು ಪ್ರಯೋಜನ ಭಯಂಕರ ಅನಾರೋಗ್ಯ-ಮನೋರೋಗಗಳು-ದಾರಿಬಿಟ್ಟ ಮಕ್ಕಳು ಇವುಗಳೂ ಸಹ ಇವೆ. ಇದೇ ಅಲಕ್ಷ್ಮೀವಾಸ. ಇದು ಇಂದಿನ ಬಹುಸಂಖ್ಯ ಶ್ರೀಮಂತರ ಸಾಮಾನ್ಯ ಸ್ಥಿತಿ. ಇರಲಿ ಈಗ ಪ್ರಸಕ್ತ ಅಕ್ಷಯ ತೃತೀಯಾ ಆಚರಣೆಯ ಕುರಿತು ತಿಳಿಯೋಣ –

ಯತ್-ಕಿಂಚಿತ್ ದೀಯತೇ ದಾನಂ ಸ್ವಲ್ಪಂ ವಾ ಯದಿ ವಾ ಬಹು |
ತತ್ ಸರ್ವಮಕ್ಷಯಂ ಯಸ್ಮಾತ್ ತೇನೇಯಮಕ್ಷಯಾ ಸ್ಮೃತಾ ||

ಸ್ವಲ್ಪವಾಗಲಿ ಅಥವಾ ಬಹಳವಾಗಲಿ ಈ ದಿನದಂದು ಕೊಟ್ಟ ದಾನವು ಅಕ್ಷಯಫಲವನ್ನು ತಂದುಕೊಡುವುದರಿಂದ  ಆ ದಿನವನ್ನು ಅಕ್ಷಯವೆಂದು ಕರೆಯಲಾಗಿದೆ.

ಸ್ನಾತ್ವಾ ಹುತ್ವಾ ಚ ದತ್ತ್ವಾ ಚ ಜಪ್ತ್ವಾನಂತಫಲಂ ಲಭೇತ್ || ಈ ದಿವಸ ಮಾಡಿದ ಸ್ನಾನ, ಹೋಮ, ದಾನ ಮತ್ತು ಜಪಗಳಿಂದ ಅನಂತಪಟ್ಟು ಫಲವು ಲಭಿಸುವುದು.

ಅಕ್ಷಯ ತೃತೀಯಾ, ಸೋಮವಾರ ಅಥವಾ ಬುಧವಾರ ಮತ್ತು ರೋಹಿಣೀ ನಕ್ಷತ್ರ ಹೀಗೆ ಯೋಗವು ಬಂದರೇ ಅದನ್ನು ಬಹಳ ಶ್ರೇಷ್ಠವೆಂದು ಹೇಳಲಾಗಿದೆ.

ಅಕ್ಷಯ ತೃತೀಯಾ ವಿಶೇಷಗಳು

ಅಕ್ಷಯ ತೃತೀಯಾ ತ್ರೇತಾಯುಗದ ಆರಂಭದ ದಿನವಾಗಿದೆ, ಅದುದರಿಂದ ಇದು ಯುಗಾದಿ ತಿಥಿ ಎನ್ನಿಸಿಕೊಳ್ಳುತ್ತದೆ. ಪಿತೃಶ್ರಾದ್ಧ ಯುಗಾದಿ ತಿಥಿಗಳಂದು ಮಾಡುವುದು ಪಿತೃಗಳಿಗೆ ವಿಶೇಷ ಪ್ರೀತಿಕರ.

ಶ್ರೀಪರಶುರಾಮ ಜಯಂತೀ –

ಉಡುಪಿ-ಪಾಜಕ ಕ್ಷೇತ್ರದ ಶ್ರೀಪರಶುರಾಮ ದೇವರು

ದಿನವು ಶ್ರೀಹರಿಯ ಪರಶುರಾಮ ಅವತಾರದ ಜಯಂತಿಯನ್ನು ಆಚರಿಸಲಾಗುತ್ತದೆ. ಪರಶುರಾಮ ದೇವರ ಜನನ  ಸಾಯಂಕಾಲ ಸಮಯಕ್ಕಾದುದರಿಂದ ಜಯಂತಿಯನ್ನು ಪ್ರದೋಷವ್ಯಾಪಿನಿಯಾಗಿ ಗ್ರಹಿಸಬೇಕು. ದುಷ್ಟ ಶಿಕ್ಷೆ ಮತ್ತು ಶಿಷ್ಟ ರಕ್ಷಣೆಗಾಗಿ ಪರಮಾತ್ಮನು ತಾಳಿದ ಅವತಾರವಿದಾಗಿದೆ. ಕರ್ನಾಟಕದ ತುಳುನಾಡು, ಕೇರಳ, ಮಹಾರಾಷ್ಟ್ರದ ಕೊಂಕಣ ಪ್ರಾಂತಗಳಲ್ಲಿ ಪರಶುರಾಮ ಜಯಂತೀಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀಹರಿಯ ಭಾರ್ಗವರಾಮಾವತಾರವು ಸರ್ವ ಬಾಧೆ, ಕಷ್ಟಗಳಿಂದ ನಮ್ಮನ್ನು ರಕ್ಷಿಸಲಿ ಎಂದು ಈ ದಿನ ಪರಶುರಾಮದೇವರ ಪೂಜಾದಿಗಳನ್ನು ಮಾಡಬೇಕು. ಮುಂದಿನ ಮಂತ್ರದಿಂದ ಸಾಯಂಕಾಲ ಅರ್ಘ್ಯವನ್ನು ಕೊಡಬೇಕು –
ಜಮದಗ್ನಿಸುತೋ ವೀರ ಕ್ಷತ್ರಿಯಾಂತಕರ ಪ್ರಭೋ |
ಗೃಹಾಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||


ಗಂಧಲೇಪನ ಪೂಜೆ –

 ದ್ವಾರಕಾಧೀಶನಿಗೆ ಗಂಧಲೇಪನ ಪೂಜೆ

ಅಕ್ಷಯ ತೃತೀಯಾದಂದು ಶ್ರೀಹರಿಗೆ ಗಂಧಲೇಪನ ಸೇವೆಯನ್ನು ಮಾಡಲಾಗುತ್ತದೆ.
ಯಃ ಪಶ್ಯತಿ ತೃತೀಯಾಯಾಂ ಕೃಷ್ಣಂ ಚಂದನಭೂಷಿತಮ್ |
ವೈಶಾಖಸ್ಯ ಸಿತೇ ಪಕ್ಷೇ ಸ ಯಾತ್ಯಚ್ಯುತಮಂದಿರಮ್ ||
(ವಿಷ್ಣುಧರ್ಮೋತ್ತರ)
ಯಾರು ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯಾದಂದು ಚಂದನದಿಂದ ಭೂಷಿತನಾದ ಶ್ರೀಕೃಷ್ಣನ ದರ್ಶನವನ್ನು ಮಾಡುತ್ತಾರೋ ಅವರು ಸದ್ಗತಿಯನ್ನು ಹೊಂದುತ್ತಾರೆ.

ಗೌರೀ ಪೂಜೆ –

ಈ ವ್ರತದ ಆರಂಭವು ಚೈತ್ರ ಶುಕ್ಲ ತೃತೀಯಾದಿಂದ ಆರಂಭವಾಗುತ್ತದೆ ಮತ್ತು ವೈಶಾಖ ಶುಕ್ಲ ತೃತೀಯಾದಂದು ಸಮರ್ಪಣೆ ಮಾಡಲಾಗುತ್ತದೆ. ಈ ದಿನ ಮಹಾದೇವರ ಸಹಿತ ಗೌರೀ (ಪಾರ್ವತಿ) ಪೂಜೆಯನ್ನು ಮಾಡುತ್ತಾರೆ. ಮಣ್ಣಿನಿಂದ ಮಾಡಿದ ಅಥವಾ ಲೋಹದ ಉಮಾಮಹೇಶ್ವರರ ಪ್ರತಿಮೆಗಳಿಗೆ ಷೋಡಶೋಪಾಚಾರ ಪೂಜೆ ಮಾಡಬೇಕು. ವಿಶೇಷವಾಗಿ ಗಂಧ, ವಿವಿಧ ಹೂವು-ಗರಿಕೆ, ಆಭರಣಗಳನ್ನು ಅರ್ಪಿಸಿ ಆರಾಧನೆಯನ್ನು ಮಾಡಬೇಕು. ದೇವಿಗೆ ಸೀರೆಯುಡಿಸಿ ಉಡಿ ತುಂಬಬೇಕು. ನಂತರ ಮುತ್ತೈದೆಯರನ್ನು ಕುಂಕುಮ-ಅರಿಷಿಣ, ಕಾಡಿಗೆ, ವಸ್ತ್ರ, ಹೂವುಗಳನ್ನು ಕೊಟ್ಟು ಪೂಜಿಸಬೇಕು. ಅಂತೆಯೇ ಕುಮಾರಿಯರನ್ನು ಸಹ ಪೂಜೆ ಮಾಡಬೇಕು. ಐಶ್ವರ್ಯ-ಸೌಭಾಗ್ಯ-ಸಂತಾನ-ಪತಿಪ್ರಾಪ್ತಿ ಮೊದಲಾದ ಅಭೀಷ್ಟಗಳ ಪ್ರಾಪ್ತಿಗಾಗಿ ಉಮಾಮಹೇಶ್ವರರ ಪ್ರಾರ್ಥನೆಯನ್ನು ಮಾಡಬೇಕು. ವ್ರತ ಸಮಾಪ್ತಿಯ ನಂತರ ಮಣ್ಣಿನ ಪ್ರತಿಮೆಗಳಾಗಿದ್ದರೆ ಜಲದಲ್ಲಿ ವಿಸರ್ಜಿಸಲಾಗುತ್ತದೆ, ಲೋಹ ಪ್ರತಿಮೆಯಾದರೆ ಬ್ರಾಹ್ಮಣರಿಗೆ ದಾನ ಕೊಡಲಾಗುತ್ತದೆ. ಹನ್ನೆರಡು ವರ್ಷ ಈ ವ್ರತದ ಆಚರಣೆಯನ್ನು ವಿಧಿಸಲಾಗಿದೆ. (ಇದೊಂದು ಶ್ರೇಷ್ಠ ವ್ರತ. ಈ ವ್ರತದ ಕುರಿತು ಮುಂದೊಮ್ಮೆ ವಿಸ್ತಾರವಾಗಿ ಬರೆಯಲಾಗುವುದು)

ದಾನಗಳು –

ಈ ದಿನ ಯಾವ ದಾನ ಮಾಡಿದರೂ ಅದರಿಂದ ಅಕ್ಷಯಫಲ ಬರುತ್ತದೆ. ಕೆಲವು ವಿಶೇಷ ದಾನಗಳನ್ನು ಈ ದಿನ ವಿಧಾನ ಮಾಡಲಾಗಿದೆ. ವೈಶಾಖ ಮಾಸದ ಬಿಸಿಲಿನ ತಾಪದ ಉಪಶಮನಕ್ಕಾಗಿ ತೆಳುವಾದ ವಸ್ತ್ರಗಳು, ಕೊಡೆ, ಬೀಸಣಿಕೆ, ಪಾದರಕ್ಷೆಗಳನ್ನು ದಾನ ಮಾಡಬಹುದು. ಪಾನಕ, ಏಳನೀರು, ಕಬ್ಬಿನ ರಸ, ಹಣ್ಣುಗಳು ಇವುಗಳನ್ನು ದಾನಮಾಡಬಹುದು. ಜವೆಗೋದಿ ಅಥವಾ ಯವದ ದಾನವು ಇಂದು ಬಹಳ ವಿಶೇಷ. ಅಕ್ಷಯ ತೃತಿಯಾದಂದು ಯವದಿಂದ ಹೋಮವನ್ನು ಸಹ ಮಾಡುತ್ತಾರೆ.
ಯವಗೋಧೂಮಚಣಕಾನ್ ಸಕ್ತು ದಧ್ಯೋದನಂ ತಥಾ |
ಇಕ್ಷುಕ್ಷೀರವಿಕಾರಾಂಶ್ಚ ಹಿರಣ್ಯಂ ಚ ಸ್ವಶಕ್ತಿತಃ ||
ಉದಕುಂಭಾನ್ ಸಕರಕಾನ್ ಸನ್ನಾನ್ ಸರ್ವರಸೈಃ ಸಹ |
ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂ ದಾನೇ ಪ್ರಶಸ್ಯತೇ ||
(ಭವಿಷ್ಯೋತ್ತರ ಪುರಾಣ)
ಜವೆಗೋದಿ, ಗೋದಿ, ಕಡಲೆ, ಹುರಿಹಿಟ್ಟು (ಸಕ್ತು), ಮೊಸರನ್ನ, ಕಬ್ಬಿನ ರಸ, ಹಾಲಿನಿಂದ ಮಾಡಿದ ಪದಾರ್ಥಗಳು, ಚಿನ್ನ, ಜಲಕುಂಭ, ಅನ್ನ ಮತ್ತು ಗ್ರೀಷ್ಮಋತುವಿನಲ್ಲಿ ಬೆಳೆಯುವಂತಹ ಧಾನ್ಯಗಳು – ಈ ವಸ್ತುಗಳನ್ನು ದಾನ ಮಾಡಬೇಕು. ಪಿತೃಶ್ರಾದ್ಧ ಬ್ರಾಹ್ಮಣ ಭೋಜನಗಳನ್ನು ಮಾಡಿಸಬೇಕು.

ಜಲಕುಂಭ ಅಥವಾ ಧರ್ಮಘಟ ದಾನ –

ಈ ದಾನವು ದೇವತೆಗಳ ಮತ್ತು ಪಿತೃಗಳ ಪ್ರೀತಿಗಾಗಿ ಮಾಡಲಾಗುತ್ತದೆ. ಲೋಹದ ಅಥವಾ ಮಣ್ಣಿನ ಘಟದಲ್ಲಿ ನೀರು ತುಂಬಿಸಿ ಗಂಧ, ತುಳಸಿ, ಹೂವು, ಎಳ್ಳು ಇವುಗಳನ್ನು ಹಾಕಿ ಯೋಗ್ಯ ಬ್ರಾಹ್ಮಣನಿಗೆ ದಾನ ಮಾಡಬೇಕು. ಬ್ರಾಹ್ಮಣನಿಗೆ ಭೋಜನವನ್ನು ಮಾಡಿಸಬೇಕು ಅಥವಾ ಭೋಜನ ಸಾಮಗ್ರಿಗಳನ್ನು ಫಲ-ಸದಕ್ಷಿಣಾಕವಾಗಿ ಘಟದ ಜೊತೆಗೆ ದಾನಮಾಡಬೇಕು. ಈ ದಾನದಿಂದ ಸಕಲ ದೇವತೆಗಳಿಗೆ ಮತ್ತು ಪಿತೃಗಳಿಗೆ ಸಂತೋಷ ಉಂಟಾಗುತ್ತದೆ ನಮ್ಮ ಸಕಲ ಬಯಕೆಗಳು ಈಡೇರುತ್ತವೆ.
ದಾನ ಮಂತ್ರ –
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನಾತ್-ಸಕಲಾ ಮಮ ಸಂತು ಮನೊರಥಾಃ ||
(ದೇವತೆಗಳ ಉದ್ದೇಶ್ಯವಾಗಿ)
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನಾತ್-ತೃಪ್ಯಂತು ಪಿತರೋಪಿ ಪಿತಾಮಹಾಃ ||
ಗಂಧೋದಕತಿಲೈರ್ಮಿಶ್ರಂ ಸಾನ್ನಂ ಕುಂಭಂ ಫಲಾನ್ವಿತಮ್ | 
ಪಿತೃಭ್ಯಃ ಸಂಪ್ರದಾಸ್ಯಾಮಿ ಅಕ್ಷಯ್ಯಮುಪತಿಷ್ಠತು ||
(ಪಿತೃಗಳ ಉದ್ದೇಶ್ಯವಾಗಿ)

ಅಕ್ಷಯ ತೃತೀಯಾ ದಿನದಂದು ವಿಶೇಷವಾಗಿ ದಾನ, ಜಪ, ಪಾರಾಯಣಾದಿಗಳನ್ನು ಮಾಡಿ ಭಗವಂತನ ಕೃಪೆಯಿಂದ ಅಕ್ಷಯಫಲವನ್ನು ಪಡೆಯೋಣ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆಗಳು.