ಮಕರ ಸಂಕ್ರಮಣ – 14 ಜನೇವರಿ 2017

ದಿನಾಂಕ 14 ಶನಿವಾರದಂದು ಮಕರ ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯಕಾಲದ ಆಚರಣೆ. ದಿನಾಂಕ 14 ಜನೆವರೀ 2017 ಶನಿವಾರದಂದು ಪ್ರಾತಃಕಾಲ 7 ಗಂಟೆ 38 ನಿಮಿಷಕ್ಕೆ ಮಕರ ಸಂಕ್ರಾಂತಿಯು ಇರುತ್ತದೆ. ಸಂಕ್ರಮಣ ಪರ್ವಕಾಲವು ಬೆಳಿಗ್ಗೆ 7-38 ರಿಂದ ಮಧ್ಯಾಹ್ನ 3-38 ರವರೆಗೆ ಇರುತ್ತದೆ. ಸಂಕ್ರಮಣ ಪರ್ವಕಾಲದಲ್ಲಿ ಸ್ನಾನ-ದಾನಾದಿಗಳು ನೂರುಪಟ್ಟು ಪುಣ್ಯಪ್ರದ.

ಸೂರ್ಯನು ಒಂದು ರಾಶಿಯಿಂದ ಮುಂದಿನ ರಾಶಿಗೆ ಪ್ರವೇಶಿಸುವುದನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಸೂರ್ಯನು ಧನುರಾಶಿಯಿಂದ ಮಕರರಾಶಿಗೆ ಪ್ರವೇಶಮಾಡುವ ಪರ್ವಕಾಲವನ್ನು ಮಕರ ಸಂಕ್ರಮಣವೆಂದು ಕರೆಯಲಾಗುತ್ತದೆ. ಶಾಸ್ತ್ರಗಳಲ್ಲಿ ಈ ಸಂಕ್ರಮಣವನ್ನು “ಉದಗಯನ ಅಥವಾ ಉತ್ತರಾಯಣ ಸಂಕ್ರಾಂತಿ” ಎಂದು ಸಹ ಕರೆಯಲಾಗಿದೆ. ಕರ್ಕ ಮತ್ತು ಮಕರ ಸಂಕ್ರಮಣಗಳನ್ನು ಆಯನ ಸಂಕ್ರಾಂತಿಗಳೆಂದು ಧರ್ಮಶಾಸ್ತ್ರಕಾರರು ಗುರುತಿಸಿರುತ್ತಾರೆ. ಧಾರ್ಮಿಕ ಆಚರಣೆಗಳಿಗಾಗಿ ಮಕರ ಸಂಕ್ರಮಣವನ್ನು ಉತ್ತರಾಯಣದ ಆರಂಭವೆಂದು ಕರೆಯಲಾಗುತ್ತದೆ. ಉತ್ತರಾಯಣ ಸಂಕ್ರಮಣದ ಪೂರ್ವಾಪರ ಮೂರು ದಿನಗಳನ್ನು ಪುಣ್ಯಕಾಲವೆನ್ನಲಾಗುತ್ತದೆ. ಈ ದಿನಗಳು (ಸಂಕ್ರಾಂತಿ, ಹಿಂದಿನ ದಿವಸ - ಭೋಗಿ, ಮಾರನೇಯ ದಿವಸ - ಕಿಂಕ್ರಾಂತಿ) ಯಾವುವೇ ಶುಭಕಾರ್ಯ, ಶೋಡಷ ಸಂಸ್ಕಾರಾದಿ ಕರ್ಮಕಾಂಡಾದಿಗಳಿಗೆ ವರ್ಜ್ಯವಾಗಿವೆ. ಈ ದಿನ ಸೂರ್ಯನಾರಾಯಣನನ್ನು ಕುರಿತು ಜಪ, ಪೂಜೆ, ದಾನಾದಿಗಳನ್ನು ಮಾಡುವುದು ಧರ್ಮಶಾಸ್ತ್ರರೀತ್ಯಾ ವಿಹಿತವಾಗಿದೆ.

ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ |
ಸ್ನಾನ-ದಾನ-ಜಪ-ಶ್ರಾದ್ಧ-ಹೋಮಾದಿಷು ಮಹಾಫಲಾ ||
ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ.

ಸಂಕ್ರಾತಿಯಂದು ಮಾಡಿದ ದಾನ ಅತ್ಯಂತ ಫಲಪ್ರದವಾಗಿದೆ, ಇದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ –
ಸಂಕ್ರಾಂತೌ ಯಾನಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃ |
ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿಜನ್ಮನಿ ||
ಸಂಕ್ರಾಂತಿಯ ಪುಣ್ಯಕಾಲದಲ್ಲಿ ಮಾಡಲ್ಪಟ್ಟ ಹೋಮ, ಶ್ರಾದ್ಧ ಮತ್ತು ದಾನಗಳಿಂದ ಸೂರ್ಯನು ಪ್ರೀತನಾಗುತ್ತಾನೆ. ಆ ದಿನ ಕೊಟ್ಟ ದಾನ ಪದಾರ್ಥಗಳನ್ನು ಸೂರ್ಯನು ಜನ್ಮಜನ್ಮಾಂತರಗಳಲ್ಲಿಯೂ ನಿತ್ಯವಾಗಿ ನಮಗೆ ಅನುಗ್ರಹಿಸುತ್ತಾನೆ.
ಉತ್ತರಾಯಣ ಸಂಕ್ರಾಂತಿಗಳಲ್ಲಿ ಬ್ರಾಹ್ಮಣರ ಕುರಿತು ವಸ್ತ್ರದಾನವನ್ನು ಮಹಾಫಲ ಪ್ರದವೆಂದು ಹೇಳಲಾಗಿದೆ, ಶೀಘ್ರ ರೋಗಮುಕ್ತಿಗಾಗಿ ತಿಲವೃಷಭ-ತಿಲಧೇನು ದಾನವನ್ನು ಸೂಚಿಸಲಾಗಿದೆ.

ಸಂಕ್ರಾಂತಿಯ ಪುಣ್ಯಕಾಲದಲ್ಲಿ ಸ್ನಾನವು ಪುಣ್ಯಸ್ನಾನವೆನಿಸಿಕೊಳ್ಳುತ್ತದೆ ಇದರಿಂದ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಪುಣ್ಯಕಾಲದಲ್ಲಿ ತಿಲಮಿಶ್ರಿತ ಜಲದಿಂದ ಸ್ನಾನ ಮಾಡಿದಲ್ಲಿ ಚರ್ಮವ್ಯಾಧಿಗಳು ಪರಿಹಾರವಾಗುತ್ತವೆ –
ರವಿಸಂಕ್ರಮಣೇ ಪ್ರಾಪ್ತೇ ನ ಸ್ನಾಯಾದ್ ಯಸ್ತು ಮಾನವಃ |
ಚಿರಕಾಲಿಕರೋಗೀ ಸ್ಯಾನ್ನಿರ್ಧನಶ್ಚೈವ ಜಾಯತೇ ||
ರವಿಯ ಸಂಕ್ರಮಣವು ಇದ್ದಾಗ ಯಾವ ಮಾನವನು ಪುಣ್ಯಸ್ನಾನವನ್ನು ಮಾಡುವುದಿಲ್ಲವೋ ಅವನು ಚಿರಕಾಲದ ವರೆಗೆ ರೋಗಿಷ್ಟನಾಗುತ್ತಾನೆ ಮತ್ತು ನಿರ್ಧನನಾಗುತ್ತಾದೆ.


ನಮ್ಮ ನಾಡಿನಾದ್ಯಂತ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳು ಬೀರುವ ಆಚರಣೆ ಕರ್ನಾಟಕದ ವಿಶಿಷ್ಠ ಆಚರಣೆಗಳಲ್ಲಿ ಒಂದು. ಎಳ್ಳು ಮಿಶ್ರಿತ ನೀರಿನಿಂದ ಸ್ನಾನ, ಎಳ್ಳಿನಿಂದ ತರ್ಪಣಗಳು ಸಂಕ್ರಮಣಕ್ಕೆ ವಿಹಿತ ಕರ್ಮಗಳು. ಈ ದಿನ ಎಳ್ಳು, ಬೆಲ್ಲ, ಕೊಬ್ಬರಿ, ಕಡಲೇಕಾಯಿ, ಹುರಿದಕಡಲೆ ಇವುಗಳ ಮಿಶ್ರಣವನ್ನು ದೇವರಿಗೆ ಸಮರ್ಪಿಸಿ ಗುರು ಹಿರಿಯರಿಗೆ ಕೊಟ್ಟು ತಾವೂ ತೆಗೆದುಕೊಳ್ಳಬೇಕು. ಎಳ್ಳು ಮತ್ತು ಬೆಲ್ಲದ ಈ ಮಿಶ್ರಣಕ್ಕೆ ಆಯುರ್ವೇದದಲ್ಲಿಯೂ ಸಹ ವಿಶೇಷವಾಗಿ ಮಹತ್ವವನ್ನು ಹೇಳಲಾಗಿದೆ. ಈ ದಿನ ಚಿಕ್ಕ ಮಕ್ಕಳಿಗೆ ಎಳ್ಳಿನಿಂದ ಎರೆಯುವ ಸಂಪ್ರದಾಯವೂ ಇದೆ.


ಪೌರಾಣಿಕವಾಗಿ ಸಂಕ್ರಾಂತಿಯನ್ನು ಒಂದು ದೇವಿಯನ್ನಾಗಿ ಚಿತ್ರಿಸಲಾಗಿದೆ. ಸಂಕ್ರಾಂತಿ ಮಹಾತ್ಮೆಯ ಪ್ರಕಾರ ಹಿಂದೊಮ್ಮೆ ಈ ದೇವಿಯು ಸಂಕ್ರಮಣದ ದಿನದಂದು ಸಂಕರಾಸುರನೆಂಬ ಅಸುರನನ್ನು ಸಂಹಾರಮಾಡಿ ಲೋಕಕ್ಕೆಲ್ಲ ಸುಖವನ್ನುಂಟು ಮಾಡಿದಳು. ಸಂಕ್ರಾಂತಿಯ ಮಾರನೇಯ ದಿನ ದೇವಿಯು ಕಿಂಕರಾಸುರನ ವಧೆ ಮಾಡಿದಳು, ಆದ್ದರಿಂದ ಆ ದಿನವನ್ನು ಕಿಂಕ್ರಾಂತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಸಂಕ್ರಾಂತಿಯು ಅಸುರ ಮತ್ತು ದುಷ್ಟ ಶಕ್ತಿಗಳ ನಾಶದ ಪ್ರತೀಕವಾಗಿದೆ. ದೂರ್ವಾಸ ಮಹರ್ಷಿಯ ಉಪದೇಶದಂತೆ ದ್ರೋಣಾಚಾರ್ಯರ ಪತ್ನಿಯಾದ ಕೃಪಿಯು ಸಂಕ್ರಾಂತಿಯ ವೃತವನ್ನು ಆಚರಿಸಿ ಪುತ್ರನನ್ನು ಮತ್ತು ಸಂಪತ್ತನ್ನು ಪಡೆದಳು, ಆದ್ದರಿಂದ ಸಂಕ್ರಾಂತಿಯು ಸಂತಾನ ಮತ್ತು ಸಂಪತ್ಪ್ರದಾಯಕವಾಗಿದೆ. ಸಂಕ್ರಮಣವನ್ನು ದೈವಪ್ರತೀಕವೆಂದು ಕಲ್ಪಿಸಿ ಶಕ್ತಿ ದೇವತೆಯ ರೂಪದಲ್ಲಿ ಪಂಚಾಂಗಗಳಲ್ಲಿ ಕೊಡಲಾಗಿರುತ್ತದೆ. ಸಂಕ್ರಾಂತಿಯು ಯಾವ ದಿಕ್ಕಿನಿಂದ ಬಂತು, ಯಾವ ದಿಕ್ಕಿನೆಡೆಗೆ ಮುಖ ಮಾಡಿದೆ, ಯಾವ ವಾಹನ-ಉಪವಾಹನವನ್ನು ಹೊಂದಿದೆ, ಯಾವ ಆಯುಧವನ್ನು ಹಿಡಿದೆದೆ ಇತ್ಯಾದಿ ವಿಷಯಗಳನ್ನು ಪಂಚಾಂಗಗಳಲ್ಲಿ ಕೊಡಲಾಗುತ್ತದೆ. ಸಂಕ್ರಾಂತಿಯ ದಿನ ಸಂಕ್ರಾಂತಿಯ ಈ ಸ್ವರೂಪವನ್ನು ಜ್ಯೋತಿಷ್ಯರಿಂದ ಶ್ರವಣ ಮಾಡಬೇಕು. ಈಗ ಪ್ರಸಕ್ತ ಜನೆವರಿ 14 ರಂದು ಬರಲಿರುವ ಮಕರ ಸಂಕ್ರಮಣದ ಲಕ್ಷಣ ಮತ್ತು ಫಲಗಳನ್ನು ನೋಡೋಣ.

ಶ್ರೀ ಗಣೇಶಾಯ ನಮಃ || ನವಗ್ರಹಗಳಿಗೆ, ಬ್ರಹ್ಮ ರುದ್ರ ವಿಷ್ಣು ತ್ರಿಮೂರ್ತಿಗಳಿಗೆ ವಂದಿಸಿ ಸಂಕ್ರಮಣ ಫಲವನ್ನು ಕೆಳುವುದು.

ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ |
ತಿಲಭುಕ್ ತಿಲದಾತಾ ಚ ಷಟ್‍ತಿಲಾಃ ಪಾಪನಾಶಕಾಃ ||
ತಿಲ (ಎಳ್ಳು) ಮಿಶ್ರಿತ ಜಲದಿಂದ ಸ್ನಾನ, ತಿಲವನ್ನು ಶರೀರಕ್ಕೆ ಲೇಪಿಸಿಕೊಳ್ಳುವುದು, ತಿಲದಿಂದ ಹೋಮ, ತಿಲತರ್ಪಣ, ತಿಲ ಭಕ್ಷಣ ಮತ್ತು ತಿಲದ ದಾನ – ಈ ರೀತಿ ತಿಲಕ್ಕೆ ಸಂಬಂಧಿತ ಆರು ಕಾರ್ಯಗಳು ಸಂಕ್ರಮಣದಲ್ಲಿ ಸಕಲ ಪಾಪನಾಶಕವಾಗಿರುತ್ತದೆ.

ಶ್ರೀಶಾಲಿವಾಹನ ಶಕೆ 1938 ದುರ್ಮುಖನಾಮ ಸಂವತ್ಸರ ಉತ್ತರಾಯಣ, ಪೌಷ ಕೃಷ್ಣ ದ್ವಿತೀಯಾ, ಶನಿವಾರ, ಆಶ್ಲೇಷಾ ನಕ್ಷತ್ರ, ಪ್ರೀತಿ ಯೋಗ, ಗರಜ ಕರಣ, ದಿನಾಂಕ 14 ಜನೆವರೀ 2017 ರಂದು ಪ್ರಾತಃಕಾಲ 7 ಗಂಟೆ 38 ನಿಮಿಷಕ್ಕೆ (ಸಂಕ್ರಾಂತಿ ಪ್ರವೇಶ) ನಿರಯನ ಸೂರ್ಯನ ಪ್ರವೇಶವು ಮಕರರಾಶಿಯಲ್ಲಿ ಆಗುತ್ತದೆ. ಸಂಕ್ರಾಂತಿಯ ಪುಣ್ಯಕಾಲವು ಮಧ್ಯಾಹ್ನ 3 ಗಂಟೆ 38 ನಿಮಿಷದ ವರೆಗೆ ಇರುತ್ತದೆ.

ಸಂಕ್ರಾಂತಿಯ ಸ್ವರೂಪ – ಸಂಕ್ರಮಣವು ಗರಜ ಕರಣದಲ್ಲಿ ಆಗುವುದರಿಂದ ವಾಹನ ಆನೆಯಾಗಿರುತ್ತದೆ ಮತ್ತು ಉಪವಾಹನವು ಕತ್ತೆಯಾಗಿರುತ್ತದೆ. ಸಂಕ್ರಾಂತಿಯು ಕೆಂಪುಬಣ್ಣದ ವಸ್ತ್ರಗಳನ್ನು ಉಟ್ಟಿರುತ್ತಾಳೆ, ಕೈಯಲ್ಲಿ ಧನುಷ್ಯವನ್ನು ಆಯುಧವಾಗಿ ಧರಿಸಿರುತ್ತಾಳೆ. ಅವಳು ಗೋರೋಚನದ ತಿಲಕವನ್ನು ಧಾರಣ ಮಾಡಿರುತ್ತಾಳೆ. ಪ್ರೌಢವಯಸ್ಕಳಾದ ಸಂಕ್ರಾಂತಿಯು ಕುಳಿತುಕೊಂಡಿರುತ್ತಾಳೆ. ಸುವಾಸಿತ ಬಿಲ್ವಪುಷ್ಪವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಹಾಲಿನ ಭಕ್ಷಣೆಯನ್ನು ಮಾಡುತ್ತಿದ್ದಾಳೆ. ಅವಳದು ಪಶುಜಾತಿಯಾಗಿದೆ. ಆಭೂಷಣಾರ್ಥವಾಗಿ ಗೋಮೇಧರತ್ನವನ್ನು ಧರಿಸಿರುತ್ತಾಳೆ.

ಸಂಕ್ರಾಂತಿಯು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನ ಕಡೆಗೆ ಹೊರಟಿದ್ದಾಳೆ, ಈಶಾನ್ಯ ದಿಕ್ಕಿನ್ನು ನೋಡುತ್ತಿರುತ್ತಾಳೆ. ಸಂಕ್ರಾಂತಿಯು ಯಾವ ದಿಕ್ಕಿನಿಂದ ಬರುತ್ತದೆಯೋ ಆ ದಿಕ್ಕಿನ ಪ್ರದೇಶಗಳ ಜನರಿಗೆ ಸಮೃದ್ಧಿ-ಸುಖ-ಲಾಭ ಪ್ರಾಪ್ತಿಯಾಗುತ್ತದೆ, ಯಾವ ದಿಕ್ಕಿನಕಡೆಗೆ ಹೊರಡುತ್ತದೆಯೋ ಆ ದಿಕ್ಕಿನ ಪ್ರದೇಶದ ಜನರಿಗೆ ಉತ್ಪಾತ-ದುಃಖ-ನಷ್ಟ ಪ್ರಾಪ್ತಿಯಾಗುತ್ತದೆ. ಸಂಕ್ರಾಂತಿಯು ಧಾರಣ ಮಾಡಿರುವ ವಸ್ತುಗಳು ದುಬಾರಿಯಾಗುತ್ತವೆ.

ಸಂಕ್ರಾಂತಿ ಕಾಲದಲ್ಲಿ ವರ್ಜ್ಯ ಕರ್ಮಗಳು –
ಸಂಕ್ರಮಣ ಕಾಲದಲ್ಲಿ ಕಠೋರವಾಗಿ ಮಾತನಾಡುವುದು, ಸಿಟ್ಟು, ಜಗಳಗಳನ್ನು ಮಾಡಬಾರದು. ಮಾಡಿದ್ದೇ ಆದರೆ ವರ್ಷ ಪೂರ್ಣ ಕಲಹವೇ ಫಲರೂಪವಾಗಿ ಪ್ರಾಪ್ತವಾಗುತ್ತದೆ, ಆದ್ದರಿಂದ ಶಾಂತಿ ಮತ್ತು ಸಂಯಮಿಗಳಾಗಿ ವರ್ತಿಸಬೇಕು. ಗಿಡ ಮರಗಳನ್ನು ಕತ್ತರಿಸುವುದು, ಹುಲ್ಲು ತೆಗೆಯುವುದು ಮಾಡಬಾರದು. ಸ್ತ್ರೀಭೋಗ ಕಾಮವಿಷಯಗಳನ್ನು ತ್ಯಾಗ ಮಾಡಬೇಕು. ಆಕಳು, ಎಮ್ಮೆ, ಕುರಿ ಮೊದಲಾದವುಗಳ ನೊಗ, ಹಗ್ಗಗಳನ್ನು ಇಳಿಸಬಾರದು. ಸಂಕ್ರಮಣಕಾಲದಲ್ಲಿ ಅಧ್ಯಯನಾದಿಗಳನ್ನು ಮಾಡಬಾರದು. ವಿವಾಹಾದಿ ಶುಭಕಾರ್ಯಗಳನ್ನು ಮಾಡಬಾರದು. ಗ್ರಹಪ್ರವೇಶ, ಹೊಸ ವಸ್ತುಗಳ ಖರೀದಿಯನ್ನು ಮಾಡಬಾರದು.

ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗೀ ಎಂದು ಕರೆಯುತ್ತಾರೆ, ಈ ಹಬ್ಬವನ್ನು ವಿಶೇಷವಾಗಿ ಸ್ತ್ರೀಯರು ಆಚರಿಸುತ್ತಾರೆ. ಸಂಕ್ರಾಂತಿಯ ಮಾರನೇಯ ದಿನವನ್ನು ಕರಿದಿನವೆಂದೂ, ಕೆಲವೆಡೆ ಕಿಂಕ್ರಾಂತಿಯೆಂದೂ ಕರೆಯುವುದುಂಟು. ಈ ದಿನವು ಅಶುಭವಾಗಿದ್ದು ಯಾವುದೇ ಶುಭ ಕಾರ್ಯಕ್ಕೆ, ಹೊಸ ಕಾರ್ಯಾರಂಭಕ್ಕೆ, ಖರೀದಿ, ವ್ಯಾಪಾರ, ವ್ಯವಹಾರಾದಿಗಳಿಗೆ ಯೋಗ್ಯವಲ್ಲ.

ಸಂಕ್ರಮಣದ ದಾನಗಳು –
ಸಂಕ್ರಾಂತಿಯ ಪುಣ್ಯಕಾಲದಲ್ಲಿ ಹೊಸ ಪಾತ್ರೆಗಳು, ಗೋಗ್ರಾಸ, ತಿಲ ಸಹಿತ ಪಾತ್ರ, ಎಳ್ಳು, ಬೆಲ್ಲ, ಉಣ್ಣೆಯ ಬಟ್ಟೆಗಳು, ತುಪ್ಪ, ಚಿನ್ನ, ಭೂದಾನ, ಆಕಳು, ವಸ್ತ್ರ ಇತ್ಯಾದಿಗಳನ್ನು ಸದಕ್ಷಿಣಾಕವಾಗಿ ಬ್ರಾಹ್ಮಣರಿಗೆ ದಾನಮಾಡಬೇಕು. ಈ ದಿನ ಮುತ್ತೈದೆಯರಿಗೆ ಮಂಗಳ ದ್ರವ್ಯಗಳನ್ನು, ವಸ್ತ್ರದಾನವನ್ನು ಸಹ ವಿಶೇಷವಾಗಿ ಮಾಡಲಾಗುತ್ತದೆ.

ಜನ್ಮನಕ್ಷತ್ರಗಳ ಮೇಲಿಂದ ಸಂಕ್ರಮಣದ ಫಲ –
ಪಂಥಾ – ಮಘಾ, ಪೂರ್ವಾ, ಉತ್ತರಾ. ಫಲ – ಪ್ರವಾಸ ಯೋಗ.
ಭೋಗ – ಹಸ್ತಾ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠಾ. ಫಲ – ಸುಖ ಭೋಗ.
ವ್ಯಥಾ – ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ. ಫಲ – ಶರೀರ ಪೀಡೆ.
ವಸ್ತ್ರಮ್ – ಶ್ರವಣಾ, ಧನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದ, ಉತ್ತರಾಭಾದ್ರಪದ, ರೇವತೀ. ಫಲ – ವಸ್ತ್ರಾದಿ ಆಭೂಷಣಗಳ ಪ್ರಾಪ್ತಿ.
ಹಾನಿ – ಅಶ್ವಿನೀ, ಭರಣೀ, ಕೃತ್ತಿಕಾ. ಫಲ – ದ್ರವ್ಯ ಹಾನಿ.
ವಿಪುಲಂ ಧನಮ್ – ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ. ಫಲ – ಧನ ಪ್ರಾಪ್ತಿ.

ಈ ರೀತಿ ಸಂಕ್ರಮಣ ಫಲ ಶ್ರವಣಮಾಡುವುವರ ಮತ್ತು ಯೋಗ್ಯ ದಾನಾದಿಗಳನ್ನು ಮಾಡುವವರ ಮನೆಯಲ್ಲಿ ಎಲ್ಲ ಸೌಭಾಗ್ಯ, ಸುಖ, ಶಾಂತಿ, ಲಕ್ಷ್ಮೀಯು ಸ್ಥಿರವಾಗಿ ನೆಲೆಸಿ ಅರೋಗ್ಯ, ಸಂಪತ್ತು, ಅನುರೂಪ ಪತಿ-ಪತ್ನಿ, ಸಂತಾನ, ಪಶುಭಾಗ್ಯ, ಬಂಧುಗಳ ಭಾಗ್ಯಗಳು ಲಭಿಸುತ್ತವೆ. ಸಂಕ್ರಮಣ ಪರ್ವಕಾಲದಲ್ಲಿ ಸ್ನಾನದಾನಾದಿಗಳು ನೂರುಪಟ್ಟು ಪುಣ್ಯಪ್ರದ. ಮಕರ ಸಂಕ್ರಮಣದ ದಿನ ಸೂರ್ಯನಾರಾಯಣನ ಉಪಾಸನೆ, ದೈವಕಾರ್ಯಗಳು, ಜಪ, ತರ್ಪಣ, ಪಾರಾಯಣಾದಿಗಳು ಅತ್ಯಂತ ಪುಣ್ಯಪ್ರದಗಳಾಗಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆಗಳು.