ಶ್ರೀನವಗ್ರಹ ಸ್ತೋತ್ರ - ಶ್ರೀವಾದಿರಾಜ ತೀರ್ಥ ವಿರಚಿತ

ಉತ್ತರ ಕನ್ನಡ ಜಿಲ್ಲೆಯ ಸೋದೆಯು ಪ್ರಸಿದ್ಧ ಮತ್ತು ಜಾಗ್ರತ ತೀರ್ಥಕ್ಷೇತ್ರ. ಇದು ಕನ್ನಡ ನಾಡಿನ ದಿವ್ಯ ವಿಭೂತಿಗಳಲ್ಲೊಬ್ಬರಾದ ಶ್ರೀವಾದಿರಾಜ ತೀರ್ಥರ ಮೂಲ ಬೃಂದಾವನ ಕ್ಷೇತ್ರ. ಬದರಿಯಿಂದ ಬಂದ ಶ್ರೀರಮಾತ್ರಿವಿಕ್ರಮ, ಶ್ರೀಲಕ್ಷ್ಮೀಹಯಗ್ರೀವ, ಶ್ರೀಮುಖ್ಯಪ್ರಾಣ, ಧವಳಗಂಗಾತೀರವಾಸಿ ಶ್ರೀಮಹಾರುದ್ರ, ಶ್ರೀಭೂತರಾಜರು, ನಾಗಬನ ಮೊದಲಾದ ದೇವಸನ್ನಿಧಿ. ಶ್ರೀವಾದಿರಾಜರು (1480-1600) ಮಾಧ್ವ ವೈಷ್ಣವ ಪರಂಪರೆಯಲ್ಲಿ ಅವತರಿಸಿದ ಮಹಾವಿಭೂತಿಗಳು. ಶ್ರೀವ್ಯಾಸತೀರ್ಥ, ಶ್ರೀವಿಜಯೀಂದ್ರ ತೀರ್ಥರು, ಶ್ರೀಪುರಂದರ ದಾಸರು, ಶ್ರೀಕನಕ ದಾಸರು ಮೊದಲಾದ ಮಹನೀಯರ ಸಮಕಾಲೀನರು. ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಶ್ರೀವಿಷ್ಣುತೀರ್ಥರ ಪರಂಪರೆಯಲ್ಲಿ ಆಶ್ರಮ ಸ್ವೀಕರಿಸಿದರು. ಪೀಠವನ್ನು ನೂರಾಎಂಟು ವರ್ಷಗಳಷ್ಟು ಕಾಲ ಅಲಂಕರಿಸಿ ಅಸಂಖ್ಯ ಭಕ್ತರನ್ನು ಉದ್ಧರಿಸಿದರು. ನೂರಾಇಪ್ಪತ್ತು ವರ್ಷಗಳ ಸುದೀರ್ಘ ಜೀವಿತಾವಧಿಯಲ್ಲಿ ಶ್ರೀಹರಿವಾಯುಗಳ ಸೇವೆಯನ್ನು ಮಾಡಿದರು. ಸೊದೆಯಲ್ಲಿ ಪಂಚವೃಂದಾವನ್ನು ನಿರ್ಮಿಸಿ ಸಶರೀರ ವೃಂದಾವನವನ್ನು ಪ್ರವೇಶಿಸಿ ಯಾವತ್ತು ಕಾಲ ಅಲ್ಲಿ ನೆಲೆಸಿರುವರು. ಇಂದಿಗೂ ಸೋದೆಯ ಶ್ರೀವಾದಿರಾಜರ ಸನ್ನಿಧಿ ಪವಾಡಗಳ ಕ್ಷೇತ್ರ. ಶ್ರೀವಾದಿರಾಜರ ಸೇವೆಯಿಂದ ಭಕ್ತರು ತಮ್ಮ ಎಲ್ಲ ಅಭೀಷ್ಟಗಳನ್ನು ಪಡೆಯುತ್ತಾರೆ ಮತ್ತು ಲೌಕಿಕ-ಆಧ್ಯಾತ್ಮಿಕ ಸಮಸ್ಯೆಗಳಿಂದ ಪರಿಹಾರ ಹೊಂದುತ್ತಾರೆ. ಇವರು ರಚಿಸಿದ ಗ್ರಂಥರಾಶಿ ಅಗಾಧವಾದದ್ದು. ಸಂಸ್ಕೃತ, ಕನ್ನಡ, ತುಳು ಭಾಷೆಗಳಲ್ಲಿ ಇವರು ಅನೇಕ ಕೃತಿಗಳನ್ನು ರಚಿಸಿದ್ದಾರೆ. ಇವರು ರಚಿಸಿರುವ ಸಂಸ್ಕೃತ ಸ್ತೋತ್ರಗಳು ಐವತ್ತಕ್ಕೂ ಮೀರಿ ಇವೆ.
ಶ್ರೀ ವಾದಿರಾಜ ತೀರ್ಥರು
ಪ್ರಸಕ್ತ ನವಗ್ರಹ ಸ್ತೋತ್ರವು ಇವರ ಕೃತಿಗಳಲ್ಲಿ ಒಂದು. ಮಾಧ್ವ ವೈಷ್ಣವರಲ್ಲಿ ಪ್ರತಿನಿತ್ಯ ಪಾರಾಯಣ ಮಾಡಲ್ಪಡುವ ಸ್ತೋತ್ರಗಳಲ್ಲೊಂದು. ಈ ಸ್ತೋತ್ರದ ಪಾಠದಿಂದ ಗ್ರಹಪೀಡಾದಿಗಳ ನಿವಾರಣೆಯಾಗುವದು ಅನುಭವ ಸಿದ್ಧ. ಸ್ತೋತ್ರವು ಚಿಕ್ಕದಾಗಿದ್ದು ಅತ್ಯಂತ ಪ್ರಭಾವಶಾಲಿಯಾಗಿದೆ ಸತತ ಪಠಿಸಲು ಅನುಕೂಲಕರವಾಗಿದೆ. ಸ್ತೋತ್ರದ ಫಲಸ್ತುತಿಯಲ್ಲಿ - ಪರಮಾತ್ಮನಾದ ಶ್ರೀಹರಿಯ ಅನುಗ್ರಹಕ್ಕಾಗಿ ಮತ್ತು ಶತ್ರುಗಳ ನಿವಾರಣೆಗಾಗಿ ನವಗ್ರಹ ದೇವತೆಗಳನ್ನು ಪ್ರಾರ್ಥಿಸಲಾಗಿದೆ.

ಶ್ರೀವಾದಿರಾಜಯತಿ ವಿರಚಿತ ಶ್ರೀನವಗ್ರಹಸ್ತೋತ್ರಮ್

ಭಾಸ್ವಾನ್ ಮೇ ಭಾಸಯೇತ್ ತತ್ತ್ವಂ ಚಂದ್ರಶ್ಚಾಹ್ಲಾದಕೃದ್ ಭವೇತ್ |
ಮಂಗಲೋ ಮಂಗಲಂ ದದ್ಯಾತ್ ಬುಧಶ್ಚ ಬುಧತಾಂ ದಿಶೇತ್ || ೧ ||

ಗುರುರ್ಮೇ ಗುರುತಾಂ ದದ್ಯಾತ್ ಕವಿಶ್ಚ ಕವಿತಾಂ ದಿಶೇತ್ |
ಶನಿಶ್ಚ ಶಂ ಪ್ರಾಪಯತು ಕೇತುಃ ಕೇತುಂ ಜಯೇಽರ್ಪಯೇತ್ || ೨ ||

ರಾಹುರ್ಮೇ ರಾಹಯೇದ್ರೋಗಂ ಗ್ರಹಾಃ ಸಂತು ಕರಗ್ರಹಾಃ |
ನವಂ ನವಂ ಮಮೈಶ್ವರ್ಯಂ ದಿಶಂತ್ವೇತೇ ನವಗ್ರಹಾಃ || ೩ ||

ಹರೇರನುಗ್ರಹಾರ್ಥಾಯ ಶತ್ರೂಣಾಂ ನಿಗ್ರಹಾಯ ಚ |
ವಾದಿರಾಜಯತಿಪ್ರೋಕ್ತಂ ಗ್ರಹಸ್ತೋತ್ರಂ ಸದಾ ಪಠೇತ್ || ೪ ||

|| ಇತಿ ಶ್ರೀವಾದಿರಾಜಯತಿವಿರಚಿತಂ ನವಗ್ರಹಸ್ತೋತ್ರಮ್ ||

ಶ್ರೀವಾದಿರಾಜರು ಶನೈಶ್ಚರನ ಪ್ರಾರ್ಥನಾ ರೂಪವಾದ ಬಿಡಿ ಶ್ಲೋಕವೊಂದನ್ನು ರಚಿಸಿರುತ್ತಾರೆ. ಶನಿಗ್ರಹ ಸೂಚಿತ ಪೀಡೆ ಮತ್ತು ದೋಷಗಳ ಶೀಘ್ರ ಪರಿಹಾರಕ್ಕಾಗಿ ಈ ಶ್ಲೋಕವನ್ನು ಜಪಿಸಬಹುದು.

ಶ್ರೀವಾದಿರಾಜ ತೀರ್ಥ ವಿರಚಿತ ಶನೈಶ್ಚರ ಸ್ತೋತ್ರ -

ಶನೇ ದಿನಮಣೇಃ ಸೂನೋ ಹ್ಯನೇಕಗುಣಸನ್ಮಣೇ |
ಅರಿಷ್ಟಂ ಹರ ಮೇಽಭೀಷ್ಟಂ ಕುರು ಮಾ ಕುರು ಸಂಕಟಮ್ ||

ಅನೇಕ ಸದ್ಗುಣಗಳ ಆಗರನು ಮತ್ತು ಸೂರ್ಯಪುತ್ರನಾದ ಹೇ ಶ್ರೀಶನಿದೇವನೇ ನನ್ನ ಅರಿಷ್ಟಗಳನ್ನೆಲ್ಲ ಪರಿಹರಿಸು, ಅಭೀಷ್ಟಗಳನ್ನೆಲ್ಲ ಪೂರೈಸು ಮತ್ತು ಸಂಕಟಗಳನ್ನು ದೂರಮಾಡು (ಸೂಚಿತ ಸಂಕಟಗಳನ್ನು ಉಂಟುಮಾಡದಿರು).

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ

ನಿಮ್ಮ ಅನಿಸಿಕೆಗಳು.