ಗಂಗಾ ದಶಹರಾ - ಭಾಗಿರಥಿ ಜಯಂತೀ

ಸನಾತನ ವೈದಿಕ ಧರ್ಮದ ಮೂರ್ತಿಮಂತ ಜಲರೂಪೀ ಪ್ರತೀಕವೇ ಗಂಗಾನದಿ. ಗಂಗೆ ನಮ್ಮ ದೇಶದ ಜೀವ ನದಿ, ಧರ್ಮ ನದಿ, ಆಧ್ಯಾತ್ಮ ನದಿ, ದೇವ ನದಿ. ನಮ್ಮ ಶಾಸ್ತ್ರ-ಪುರಾಣಗಳಲ್ಲಿ ಗಂಗೆಗೆ ಕೊಟ್ಟಿರುವ ಮಹತ್ವ ಬೇರಾವ ತೀರ್ಥಕ್ಕೂ ನದಿಗೂ ಇಲ್ಲ. ಗಂಗೆಯು ಸಾಕ್ಷಾತ್ ಮಹಾವಿಷ್ಣುವಿನ ಪಾದಮೂಲದಿಂದ ಜನಿಸಿ, ಚತುರ್ಮುಖನ ಕಮಂಡಲುವಿನಲ್ಲಿ ನೆಲೆಸಿ, ದೇವಲೋಕದಲ್ಲಿ ಸಂಚರಿಸಿ, ಮಹಾದೇವನ ಜಟಾಮೂಲದಿಂದ ಭುವಿಗೆ ಅವತರಿಸಿ, ದರ್ಶನ-ಸ್ಪರ್ಷ-ಸ್ಮರಣ ಮಾತ್ರದಿಂದ ಪಾಪಗಳನ್ನು ಪರಿಹರಿಸುವ ಮಹಾ ಸಾಮರ್ಥ್ಯವನ್ನು ಪಡೆದಿರುವ ಮಹಾನದಿ.

ಹಿಂದೂ ಧರ್ಮಾನುಯಾಯಿಯಾದ ಪ್ರತಿಯೊಬ್ಬನಿಗೂ ಇರುವ ಆಸೆ ಜೀವನದಲ್ಲಿ ಒಮ್ಮೆಯಾದರೂ ಗಂಗಾಸ್ನಾನ ಮಾಡುವುದು. ನಮ್ಮ ಧರ್ಮದ ಆಂತರಿಕ ಪ್ರಭೇದಗಳಾದ ವೈದಿಕ, ವೈಷ್ಣವ, ಶೈವ, ಶಾಕ್ತ, ಸೌರ, ಗಾಣಪತ್ಯ ಮೊದಲಾದ ಎಲ್ಲರಿಗೂ ಗಂಗೆ ಪರಮ ಪವಿತ್ರ. ಗಂಗಾಜಲವು ಪ್ರತಿಯೊಬ್ಬ ಹಿಂದುವಿನ ಮನೆಯಲ್ಲಿ ಇದ್ದೇ ಇರುತ್ತದೆ. ಕಾಶಿಯಲ್ಲಿ ಗಂಗಾಸ್ನಾನ ಮಾಡಿ ದೇಹ ತ್ಯಜಿಸಿದವರನ್ನು ಸಾಕ್ಷಾತ್ ರುದ್ರದೇವರೇ ತಾರಕ ಮಂತ್ರೋಪದೇಶ ಮಾಡಿ ಮೋಕ್ಷ ಮಾರ್ಗಕ್ಕೆ ಕೊಂಡೊಯ್ಯುತ್ತಾರೆಂದು ನಮ್ಮ ಪುರಾಣಗಳು ಸಾರುತ್ತವೆ.

ದರ್ಶನಾತ್ ಸ್ಪರ್ಷನಾತ್ ಪಾನಾತ್ ತಥಾ ಗಂಗೇತಿ ಕೀರ್ತನಾತ್ ।
ಪುನಾತಿ ಪುಣ್ಯಪುರುಷಾನ್ ಶತಶೋಽಥ ಸಹಸ್ರಶಃ ।।
(ಅಗ್ನಿಪುರಾಣ)
ದರ್ಶನದಿಂದ, ಸ್ಪರ್ಷದಿಂದ, ಪಾನದಿಂದ ಮತ್ತು ಗಂಗಾ-ಗಂಗಾ ಎಂದು ಸ್ಮರಣೆ ಮಾಡುವುದರಿಂದ, ಅಂತಹ ಪುಣ್ಯವಂತರಾದ ಪುರುಷರ ನೂರು, ಸಾವಿರಾರು ಪೂರ್ವಜರನ್ನು ಸಹ ಗಂಗೆಯು ಪಾವನಗೊಳಿಸುತ್ತಾಳೆ (ಉದ್ಧರಿಸುತ್ತಾಳೆ).

ಪ್ರತ್ಯಕ್ಷವಾಗಿ ಗಂಗೆಯ ಸಾನ್ನಿಧ್ಯ ದೊರಕದಿದ್ದರೂ, ಕೇವಲ ಗಂಗಾ-ಗಂಗಾ ಎಂದು ನಾಮಸ್ಮರಣೆಯನ್ನು ಮಾಡಿದರೂ ಗಂಗಾಸ್ನಾನ ಫಲ ದೊರಕುತ್ತದೆ.
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।।
(ಪದ್ಮಪುರಾಣ)
ನೂರಾರು ಯೋಜನಗಳಷ್ಟು ದೂರದಿಂದಲೂ, ಯಾರು ಗಂಗಾ-ಗಂಗಾ ಎಂದು ಸ್ಮರಣೆ ಮಾಡುತ್ತಾರೋ, ಅವನು ಸರ್ವಪಾಪಗಳಿಂದಲೂ ಮುಕ್ತನಾಗಿ ವಿಷ್ಣುಲೋಕಕ್ಕೆ ಹೋಗುತ್ತಾನೆ.

ಗಂಗೆಯನ್ನು "ಸರ್ವತೀರ್ಥಮಯೀ", ಎಲ್ಲ ಪವಿತ್ರ ತೀರ್ಥಗಳನ್ನು ತನ್ನಲ್ಲಿ ಸಮಾಹಿಸಿಕೊಂಡವಳು ಎಂದು ಕರೆಯಲಾಗಿದೆ. ಗಂಗಾಸ್ನಾನ ದರ್ಶನ ಸ್ಮರಣೆಯಿಂದ ಎಲ್ಲ ತೀರ್ಥಗಳಲ್ಲಿ ಮಿಂದ ಫಲ ಬರುತ್ತದೆ. ಗಂಗಾನದಿಯ ಜಲವನ್ನು ಶಾಸ್ತ್ರಗಳಲ್ಲಿ ಬ್ರಹ್ಮದ್ರವ, ಧರ್ಮದ್ರವವೆಂದು ಕೊಂಡಾಡಲಾಗಿದೆ. ಆದ್ದರಿಂದ ಗಂಗಾನದಿಯು ಬ್ರಹ್ಮವಸ್ತುವಿನ ವಿಭೂತಿರೂಪಳೇ ಆಗಿರುತ್ತಾಳೆ.
ವಿಷ್ಣುಪಾದಾಬ್ಜ ಸಂಭೂತೇ ಗಂಗೇ ತ್ರಿಪಥಗಾಮಿನಿ । 
ಬ್ರಹ್ಮದ್ರವೇತಿ ವಿಖ್ಯಾತಾ ಪಾಪಂ ಮೇ ಹರ ಜಾಹ್ನವಿ ।।

ಮಹಾವಿಷ್ಣುವಿನ ಪಾದಪದ್ಮಗಳಿಂದ ಹುಟ್ಟಿ, ಬ್ರಹ್ಮದೇವನ ಕಮಂಡಲುವಿನಲ್ಲಿ ನೆಲೆಸಿರುವ ಕಾರಣ ಬ್ರಹ್ಮದ್ರವವೆಂದು ವಿಖ್ಯಾತಳಾದ, ಸ್ವರ್ಗ-ಭೂಮಿ-ಪಾತಾಳ ಹೀಗೆ ಮೂರು ಲೋಕಗಳಲ್ಲಿ ಸಂಚರಿಸುವ, ಜುಹ್ನು ಮಹರ್ಷಿಯ ಪುತ್ರಿಯಾದ ಗಂಗಾದೇವಿಯೇ ನನ್ನ ಸಮಸ್ತ ಪಾಪಗಳನ್ನು ನಾಶಮಾಡು.

ಗಂಗಾ ದಶಹರಾ - ಭಾಗೀರಥಿ ಜಯಂತೀ
ಸಮಸ್ತ ಲೊಕ ಕಲ್ಯಾಣಕ್ಕಾಗಿ, ಸಜ್ಜನರ ಉದ್ಧಾರಕ್ಕಾಗಿ, ಪಾಪಗಳನ್ನು ಪರಿಹರಿಸುವದಕ್ಕಾಗಿ ಗಂಗಾದೇವಿಯು ಸ್ವರ್ಗದಿಂದ ಭೂಮಿಗೆ ಅವತರಿಸಿದ ಪುಣ್ಯದಿನವೇ ಗಂಗಾ ಜಯಂತೀ. ಇದನ್ನು ಗಂಗಾ ದಶಹರಾ, ಭಾಗೀರಥಿ ಜಯಂತೀ, ದಶಹರ ದಶಮೀ ಎಂದೂ ಕರೆಯಲಾಗುತ್ತದೆ. ಪ್ರತಿವರ್ಷ ಜ್ಯೇಷ್ಠಮಾಸ ಶುಕ್ಲಪಕ್ಷ ದಶಮೀ ತಿಥಿಯಂದು ಗಂಗಾ ದಶಹರಾ ಆಚರಿಸಲಾಗುತ್ತದೆ.
ದಶಮೀ ಶುಕ್ಲಪಕ್ಷೇ ತು ಜ್ಯೇಷ್ಠಮಾಸೇ ಬುಧೇಽಹನಿ ।
ಅವತೀರ್ಣಾ ಯತಃ ಸ್ವರ್ಗಾತ್ ಹಸ್ತರ್ಕ್ಷೇ ಚ ಸರಿದ್ವರಾ ।।
(ವರಾಹ ಪುರಾಣ)
ಜ್ಯೇಷ್ಠಮಾಸ, ಶುಕ್ಲಮಾಸ, ದಶಮೀ ತಿಥಿ, ಬುಧವಾರ, ಹಸ್ತಾ ನಕ್ಷತ್ರವಿರುವ ದಿನ ಗಂಗೆಯು ಸ್ವರ್ಗದಿಂದ ಭೂಮಿಗೆ ಇಳಿದು ಬಂದಳು.

ಗಂಗಾವತರಣ
ಗಂಗಾವತರಣ

ಈ ದಿವಸ ಗಂಗಾಪೂಜೆ, ಗಂಗಾವತರಣ ಕಥೆ ಮತ್ತು ಗಂಗಾ ಮಹಾತ್ಮೆಯನ್ನು ಶ್ರವಣ ಮಾಡುವುದರಿಂದ ಹತ್ತು ವಿಧವಾದ ಪಾಪಗಳು ನಾಶವಾಗುವುದರಿಂದ ಈ ದಶಮೀ ತಿಥಿಯನ್ನು "ದಶಹರಾ" ಎಂದು ಕರೆಯಲಾಗುತ್ತದೆ.  
ಜ್ಯೆಷ್ಠೇ ಮಾಸಿ ಸಿತೇ ಪಕ್ಷೇ ದಶಮೀ ಹಸ್ತಸಂಯುತಾ ।
ಹರತೇ ದಶ ಪಾಪಾನಿ ತಸ್ಮಾತ್ ದಶಹರಾ ಸ್ಮೃತಾ ।।
(ಬ್ರಹ್ಮಪುರಾಣ)
ಜ್ಯೇಷ್ಠಮಾಸ ಶುಕ್ಲಪಕ್ಷ ಹಸ್ತ ನಕ್ಷತ್ರದಿಂದ ಕೂಡಿದ ದಶಮೀ ತಿಥಿಯು ಹತ್ತು ವಿಧವಾದ ಪಾಪಗಳನ್ನು ಪರಿಹರಿಸುವುದರಿಂದ ಅದನ್ನು ದಶಹರಾ ಎಂದು ಕರೆಯಲಾಗುತ್ತದೆ.

ಹತ್ತುವಿಧವಾದ ಪಾಪಗಳು ಯಾವುವು- ಇವು ಕಾಯಿಕ, ವಾಚಿಕ ಮತ್ತು ಮಾನಸಿಕ ಎಂದು ಮೂರು ಪ್ರಕಾರದ್ದಾಗಿವೆ.
ಆದತ್ತಾನಾಮುಪಾದಾನಂ ಹಿಂಸಾ ಚೈವಾವಿಧಾನತಃ ।
ಪರದಾರೋಪಸೇವಾ ಚ ಶಾರೀರಂ ತ್ರಿವಿಧಂ ಸ್ಮೃತಮ್ ।।
ಪಾರುಷ್ಯಮನೃತಮ್ ಚೈವ ಪೈಶುನ್ಯಂ ಚಾಪಿ ಸರ್ವಶಃ ।
ಅಸಂಬದ್ಧ ಪ್ರಲಾಪಶ್ಚ ವಾಙ್ಮಯಂ ಸ್ಯಾತ್ ಚತುರ್ವಿಧಮ್ ।।
ಪರದ್ರವ್ಯೇಷ್ವಭಿಧ್ಯಾನಂ ಮನಸಾಽನಿಷ್ಟಚಿಂತನಂ ।
ವಿತಥಾಭಿನಿವೇಶಶ್ಚ ತ್ರಿವಿಧಂ ಕರ್ಮ ಮಾನಸಮ್ ।। 
(ರಾಜಮಾರ್ತಾಂಡ, ಮನುಸ್ಮೃತಿ)
ತಾನು ಕೊಡದೇ ಇರುವ ದ್ರವ್ಯವನ್ನು ಕಿತ್ತುಕೊಳ್ಳುವುದು (ಮೋಸದಿಂದ ಪರರ ಸ್ವತ್ತನ್ನು ದೋಚುವುದು), ವಿನಾಕಾರಣ ಪರರಿಗೆ ಹಿಂಸೆಯನ್ನು ಮಾಡುವುದು, ಪರಸ್ತ್ರಿಯನ್ನು ಭೋಗಿಸುವುದು - ಇವು ಮೂರು ಕಾಯಿಕ (ಶಾರೀರಿಕ) ಪಾಪಗಳು.
ಕೆಟ್ಟದಾಗಿ ಮಾತನಾಡುವುದು, ಸುಳ್ಳು ಹೇಳುವುದು, ಚಾಡೀಖೋರತನ, ನಿಷ್ಪ್ರಯೋಜಕವಾದ ಅಸಂಬದ್ಧ ಮಾತುಗಳನ್ನಾಡುವುದು - ಇವು ನಾಲ್ಕು ವಾಚಿಕ ಪಾಪಗಳು.
ಪರದ್ರವ್ಯವನ್ನು ದೋಚುವ ಸಂಚು ಹಾಕುವುದು, ಇನ್ನೊಬ್ಬರ ಬಗ್ಗೆ ಮನಸ್ಸಿನಲ್ಲಿ ಅನಿಷ್ಟ-ಕೇಡು ಬಯಸುವುದು, ತನ್ನನ್ನು ಇತರರಿಗಿಂತ ಶ್ರೇಷ್ಠನೆಂದು ತಿಳಿದುಕೊಳ್ಳುವುದು - ಇವು ಮೂರು ಮಾನಸಿಕ ಪಾಪಗಳಾಗಿವೆ.

ಈ ನೀಚ ಕೃತ್ಯಗಳನ್ನು ಸರ್ವಥಾ ಮಾಡಬಾರದು, ಪ್ರಮಾದವಶಾತ್ ಇಂತಹ ಕೃತ್ಯ ನಡೆದದ್ದೇ ಆದರೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆಂದು ಮತ್ತೆ ಈ ಕೃತ್ಯಗಳು ನಡೆಯದಂತೆ ಎಚ್ಚರ ವಹಿಸಬೇಕು. ಮೇಲ್ಕಂಡ ಇಂತಹ ಅತ್ಯಂತ ಹೇಯ ಮಹಾಪಾತಕಗಳನ್ನು ಶ್ರೀಹರಿಪಾದಾಬ್ಜಸಂಭೂತೆಯಾದ ಗಂಗೆಯು ಪರಿಹಾರಮಾಡುತ್ತಾಳೆ.  ಗಂಗಾ ಸೇವೆಯು ಪ್ರಾಯಶ್ಚಿತ್ತಕ್ಕೆ ಪರಮ ಸಾಧನ, ಸನ್ಮಾರ್ಗಕ್ಕೆ ಪರಮ ಸೋಪಾನ.

ಆಚರಣೆ -
ಈ ದಿನದಂದು ಗಂಗಾಸ್ನಾನವನ್ನು ವಿಧಿಸಲಾಗಿದೆ. ಗಂಗಾಸ್ನಾನ ಪ್ರತ್ಯಕ್ಷ ಸಾಧ್ಯವಿರದಿದ್ದಾಗ ಯಥಾ ಉಪಲಬ್ಧವಾದ ನೀರಿನಲ್ಲಿಯೆ ಗಂಗಾದೇವಿಯ ಸಾನ್ನಿಧ್ಯವನ್ನು ಅನುಸಂಧಾನ ಮಾಡಿ, ಗಂಗಾಸ್ಮರಣಪೂರ್ವಕ ಸ್ನಾನವನ್ನು ಮಾಡಬಹುದು.
ಗಂಗಾಕಲಶವನ್ನು ಯಥಾಶಕ್ತಿ (ಪುರೋಹಿತರ ಮುಖಾಂತರ ವಿಧಾನೋಕ್ತ-ಶಾಸ್ತ್ರೋಕ್ತವಾಗಿ) ಷೋಡಶೋಪಚಾರಗಳಿಂದ ಪೂಜಿಸಬೇಕು. ಗಂಗಾ ದಶಹರಾದಂದು ವಿಶೇಷವಾಗಿ ಪಠಿಸಲಾಗುವ "ಗಂಗಾ ದಶಹರಾ ಸ್ತೋತ್ರ"ವನ್ನು ಪಠಿಸಬೇಕು. ಗಂಗಾವತರಣದ ಕಥೆಯನ್ನು ಶ್ರವಣ ಮಾಡಬೇಕು. ಗಂಗಾದೇವಿಗೆ ಹಾಲಿನಿಂದ ಅರ್ಘ್ಯವನ್ನು ಸಮರ್ಪಿಸಬೆಕು. ಪ್ರವಹಿಸುವ ಜಲದಲ್ಲಿ ದೀಪದಾನವನ್ನು ಮಾಡಬೇಕು.
ಈ ಉತ್ಸವವನ್ನು ಉತ್ತರ ಭಾರತದಲ್ಲಿ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಗಂಗಾತೀರದ ಪುಣ್ಯಕ್ಷೇತ್ರಗಳಲ್ಲಿ ವಿಶೇಷವಾಗಿ ಗಂಗಾ ಆರತಿಯನ್ನು ಮಾಡಲಾಗುತ್ತದೆ.

ಗಂಗಾ ಪ್ರಾರ್ಥನೆ -
ನಮಾಮಿ ಗಂಗೇ ತವ ಪಾದಪಂಕಜಂ
ಸುರಾಸುರೈರ್ವಂದಿತ ದಿವ್ಯರೂಪಮ್ ।
ಭುಕ್ತಿಂ ಚ ಮುಕ್ತಿಂ ಚ ದದಾಸಿ ನಿತ್ಯಂ
ಭಾವಾನುಸಾರೇಣ ಸದಾ ನರಾಣಾಮ್ ।।
ನಮಸ್ತೇ ಪಾಪಸಂಹತ್ರೇ ಹರಮೌಲಿವಿರಾಜಿತೇ
ನಮಸ್ತೇ ಸರ್ವಲೋಕಾನಾಂ ಹಿತಾಯ ಧರಣೀಗತೇ ।
ಸ್ವರ್ಗಾಪವರ್ಗದೇ ದೇವಿ ಗಂಗೇ ಪತಿತಪಾವನಿ
ತ್ವಾಮಹಂ ಶರಣಂ ಯಾತಃ ಪ್ರಸನ್ನಾ ಮಾಂ ಸಮುದ್ಧರ ।।
ವಿಷ್ಣುಪಾದಾಬ್ಜಸಂಭೂತೇ ಗಂಗೇ ತ್ರಿಪಥಗಾಮಿನಿ ।
ದರ್ಮದ್ರವೇತಿ ವಿಖ್ಯಾತೇ ಪಾಪಂ ಮೇ ಹರ ಜಾಹ್ನವಿ ।।
ಗಂಗಾ ಗಂಗೇತಿ ಯೋ ಬ್ರೂಯಾತ್ ಯೋಜನಾನಾಂ ಶತೈರಪಿ ।
ಮುಚ್ಯತೇ ಸರ್ವಪಾಪೇಭ್ಯೋ ವಿಷ್ಣುಲೋಕಂ ಸ ಗಚ್ಛತಿ ।।


ದಶಹರಾ ದಶಯೋಗ -
ಜ್ಯೇಷ್ಠಮಾಸ, ಶುಕ್ಲಪಕ್ಷ, ದಶಮೀ ತಿಥಿ, ಬುಧವಾರ, ಹಸ್ತ ನಕ್ಷತ್ರ, ವ್ಯತೀಪಾತ ಯೋಗ, ಗರ ಕರಣ, ಆನಂದ ಯೋಗ, ಕನ್ಯಾರಾಶಿಯಲ್ಲಿ ಚಂದ್ರ, ವೃಷಭರಾಶಿಯಲ್ಲಿ ರವಿ - ಹೀಗೆ ಹತ್ತು ಯೋಗಗಳು ಕೂಡಿ ಬಂದರೆ ಅದನ್ನು ದಶಯೋಗವೆಂದು ಕರೆಯುತ್ತಾರೆ. ಇದು ಮಹಾಪುಣ್ಯಪ್ರದವಾದ ಯೋಗವಾಗಿರುತ್ತದೆ. ಪ್ರತಿ ಬಾರಿ ಜ್ಯೇಷ್ಠ ಶುದ್ಧ ದಶಮೀಯಂದು ಈ ಎಲ್ಲವು ಇರುವ ಯೋಗ ಉಂಟಾಗುವುದಿಲ್ಲ. ಆದರೆ ಹತ್ತರ ಪೈಕಿ ಎಷ್ಟು ಹೆಚ್ಚು ಯೋಗಗಳು ಕೂಡಿ ಬರುವವೋ ಅಷ್ಟು ಹೆಚ್ಚಿನ ಮಹತ್ವವಿರುತ್ತದೆ.
ಜೂನ್ 4ನೇ ತಾರೀಖು ರವಿವಾರ ಜ್ಯೇಷ್ಠ ಶುದ್ಧ ದಶಮೀ ಇದ್ದು ಅಂದು ಹಸ್ತ ನಕ್ಷತ್ರ, ವ್ಯತೀಪಾತ ಯೋಗ, ಗರ ಕರಣ, ಕನ್ಯಾಚಂದ್ರ, ವೃಷಭ ರವಿ ಹೀಗೆ ಉತ್ತಮವಾದ ಯೋಗವಿರುತ್ತದೆ. ಈ ದಿನದಂದೇ ಗಂಗಾ ದಶಹರಾ ಅಥವಾ ಭಾಗೀರಥಿ ಜಯಂತಿಯನ್ನು ಆಚರಿಸಲಾಗುವುದು.   

ಅಕ್ಷಯ ತೃತೀಯಾ

ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯನ್ನು ಅಕ್ಷಯ ತೃತೀಯಾ ಎಂದು ಕರೆಯಲಾಗುತ್ತದೆ. ಯಾವ ದಿನ ಏನೇ ಶುಭ ಕಾರ್ಯಗಳನ್ನು ಮಾಡಿದರೂ ಅದು ಅಕ್ಷಯಫಲವನ್ನು ತಂದುಕೊಡುವುದೋ ಅಂತಹ ಮಹಾಮುಹೂರ್ತ ಅಕ್ಷಯ ತೃತೀಯಾ. ಇದು ಸಾಡೇ ತೀನ್ ಮುಹೂರ್ತಗಳಲ್ಲೊಂದು. ಈ ಶುಭ ಮುಹೂರ್ತಗಳಲ್ಲಿ ದಿನಶುದ್ಧಿ, ವಾರಶುದ್ಧಿ, ನಕ್ಷತ್ರಶುದ್ಧಿ  ಮೊದಲಾದ ಪಂಚಾಂಗಶುದ್ಧಿಗಳನ್ನು ನೋಡುವ ಅವಶ್ಯಕತೆ ಇಲ್ಲ. ಈ ಮುಹೂರ್ತಗಳು ಸ್ವಯಂಸಿದ್ಧಗಳಾದುದರಿಂದ ಎಲ್ಲ ಶುಭಕಾರ್ಯಗಳಿಗೆ ಪ್ರಶಸ್ತವಾಗಿವೆ. ಈ ದಿನದಂದು ಹೊಸ ವ್ಯಾಪಾರ ಆರಂಭ, ಗ್ರಹ ನಿರ್ಮಾಣ ಆರಂಭ, ಮೂರ್ತಿ ಪ್ರತಿಷ್ಠಾಪನೆ, ವಿವಾಹ (ಕನ್ಯಾದಾನ ಅಕ್ಷಯಫಲ), ಉಪನಯನಗಳನ್ನು ಸಹ ಮಾಡಬಹುದಾಗಿದೆ. ಈ ದಿನದಂದು ಹೊಸ ವಾಹನ, ಉಪಕರಣಗಳು, ವಸ್ತ್ರ, ಆಭರಣಗಳು ಮೊದಲಾದವುಗಳ ಖರೀದಿ ಶುಭ ಮತ್ತು ಅಭಿವೃದ್ಧಿಪ್ರದವಾಗಿರುತ್ತದೆ.

ಇಂದಿನ ದಿನಗಳಲ್ಲಿ ಅಕ್ಷಯ ತೃತೀಯಾ ಎಂದರೆ ದುಬಾರಿ ವಸ್ತುಗಳನ್ನು ಕೊಂಡುಕೊಳ್ಳುವ ವಿಶೇಷವಾಗಿ ಚಿನ್ನ ಖರೀದಿಮಾಡುವ ಹಬ್ಬವಾಗಿಬಿಟ್ಟಿದೆ. ಪತ್ರಿಕೆಗಳು, ಟಿವಿ, ಅಂತರ್ಜಾಲ, ಜಾಹಿರಾತು ಹೋರ್ಡಿಂಗ್‍ಗಳು ಎಲ್ಲಿ ನೋಡಿದರೂ ಚಿನ್ನ ಖರೀದಿಯ ಜಾಹಿರಾತುಗಳೇ. ಧರ್ಮಾಚರಣೆ-ವ್ರತಾಚರಣೆಗಳ ವ್ಯಾಪಾರೀಕರಣ ಹೊಸ ಶತಮಾನದ ದುಷ್ಟ ಬೆಳವಣಿಗೆಗಳಲ್ಲಿ ಒಂದು. ವ್ರತ-ಹಬ್ಬಗಳು ಶ್ರೀಮಂತರ ಮತ್ತು ದಿಖಾವೇ ಖೋರರ ಸ್ವತ್ತುಗಳಾಗುತ್ತಿವೆ. ಹಬ್ಬಗಳು ಕೇವಲ ಅಂಗಡಿಗಳಲ್ಲಿ ವಸ್ತುಗಳ ಖರೀದಿಗಾಗಿ ಮಾತ್ರ ಇವೆಯೇನೋ ಅನಿಸುವಂತಹ ಸ್ಥಿತಿಯುಂಟಾಗಿದೆ. ಧರ್ಮದ ಜಾಡಿನಲ್ಲಿ ಪಾಶ್ಚಾತ್ಯ ಗ್ರಾಹಕ ಸಂಸ್ಕೃತಿ ನಮ್ಮ ಜೀವನದಲ್ಲಿ ತನ್ನ ತಲೆ ತೂರಿಸುತ್ತಿದೆ. ಈ ದಿನ ಏನನ್ನಾದರೂ ಖರೀದಿ ಮಾಡಲೇಬೇಕು ಇಲ್ಲವಾದರೆ ಹಬ್ಬದ ಆಚರಿಸಂತಯೇ ಅಲ್ಲ ಎಂದು ಜನ ತಿಳಿದಿದ್ದಾರೆ. ನಮ್ಮ ಧರ್ಮ ಡಾಂಭಿಕರ ಮತ್ತು ವ್ಯಾಪಾರೀ ಸಂಸ್ಕೃತಿಯ ಗುಲಾಮವಾಗುತ್ತಿದೆ.

ಶಾಸ್ತ್ರಗಳ ಪ್ರಕಾರ ಯಾವ ದಿವಸ ಏನನ್ನಾದರೂ ದಾನಮಾಡುವುದರಿಂದ ನಮಗೆ ಇಹಪರದಲ್ಲಿ ಎಲ್ಲವೂ ಅಕ್ಷಯವಾಗಿ ಪ್ರಾಪ್ತವಾಗುವುದೋ ಅಂತಹ ಶ್ರೇಷ್ಠ ದಿವಸ ಅಕ್ಷಯ ತೃತೀಯಾ. ಆ ದಿನ ದುಬಾರಿ ವಸ್ತುಗಳನ್ನು ಖರಿದಿಸಿ ಮನೆಯಲ್ಲಿ ಕೂಡಿಹಾಕುವುದಲ್ಲ ಬದಲು ದಾನಾದಿಗಳನ್ನು ಮಾಡುವುದು ಶಾಸ್ತ್ರ ನಿರ್ದೇಶ. ಕೆಲವರು ಈ ದಿನ ಏನನ್ನಾದರೂ ಇತರರಿಗೆ ಕೊಟ್ಟರೆ ಅದರಿಂದ ತಾವು ಇರುವುದನ್ನೂ ಕಳೆದುಕೊಳ್ಳುತ್ತೇವೆ ಎಂಬ ಕಲ್ಪನೆಗಳನ್ನಿಟ್ಟುಕೊಂಡಿದ್ದಾರೆ, ಹೀಗೆ ಉಪದೇಶ ಮಾಡುವವರೂ ಇದ್ದಾರೆ. ಇದು ಶುದ್ಧ ಮೂರ್ಖ ಕಲ್ಪನೆ, ನಿರಾಧಾರ. ಮಹಾಲಕ್ಷ್ಮಿಯು ಕೇವಲ ಚಿನ್ನದಲ್ಲಿಯೇ ನೆಲೆಸಿದ್ದಾಳೆ ಆದ್ದರಿಂದ ಅದನ್ನು ಖರಿದೀ ಮಾಡಿದರೆ ಮನೆಗೆ ಲಕ್ಷ್ಮೀಯ ಆಗಮನವಾಗುತ್ತದೆ ಎಂಬ ಒಂದು ಜನಪ್ರೀಯ ನಂಬಿಕೆ. ಇದೂ ಸಹ ಅರ್ಧಸತ್ಯ. ಚಿನ್ನವು ಶುದ್ಧತೆಯ ಮತ್ತು ಸಾತ್ವಿಕತೆಯ ಸಂಕೇತ ಅದಕ್ಕಾಗಿ ಅಲ್ಲಿ ಲಕ್ಷ್ಮೀನಿವಾಸ. ಶುದ್ಧತೆ, ಸಾತ್ವಿಕತೆ, ಧಾರ್ಮಿಕತೆ ಎಲ್ಲಿ ಇರುವುದೋ ಅಲ್ಲಿ ಸ್ವಾಭಾವಿಕವಾಗಿ ಲಕ್ಕ್ಷ್ಮೀಯ ವಾಸವಿರುತ್ತದೆ, ಚಿನ್ನವೇ ಬೇಕೆಂದೆನಿಲ್ಲ. ಸ್ವಾರ್ಥಬುದ್ಧಿ, ಅಧರ್ಮ, ಅಶುದ್ಧಾಚರಣೆಗಳಿರುವವರು ಎಷ್ಟು ಚಿನ್ನ-ಬೆಳ್ಳಿ ಸಂಗ್ರಹಿಸಿದರೇನು ಅಲ್ಲಿ ಲಕ್ಷ್ಮೀವಾಸ ಇರುವುದಿಲ್ಲ. ಅಲ್ಲಿ ಇರುವುದು  ಅಲಕ್ಷ್ಮೀಯ ವಾಸ ಇದು ಅನರ್ಥವನ್ನೇ ತಂದುಕೊಡುವಂಥಾದ್ದು. ಭೌತಿಕವಾದ ಎಲ್ಲ ಸಂಪತ್ತು-ಸುಖವಿದೆ, ಆಸ್ತಿ-ಕಾರು-ಬಂಗೆಲೆ-ಆಳು ಎಲ್ಲ ಇದೆ ಆದರೆ ಏನು ಪ್ರಯೋಜನ ಭಯಂಕರ ಅನಾರೋಗ್ಯ-ಮನೋರೋಗಗಳು-ದಾರಿಬಿಟ್ಟ ಮಕ್ಕಳು ಇವುಗಳೂ ಸಹ ಇವೆ. ಇದೇ ಅಲಕ್ಷ್ಮೀವಾಸ. ಇದು ಇಂದಿನ ಬಹುಸಂಖ್ಯ ಶ್ರೀಮಂತರ ಸಾಮಾನ್ಯ ಸ್ಥಿತಿ. ಇರಲಿ ಈಗ ಪ್ರಸಕ್ತ ಅಕ್ಷಯ ತೃತೀಯಾ ಆಚರಣೆಯ ಕುರಿತು ತಿಳಿಯೋಣ –

ಯತ್-ಕಿಂಚಿತ್ ದೀಯತೇ ದಾನಂ ಸ್ವಲ್ಪಂ ವಾ ಯದಿ ವಾ ಬಹು |
ತತ್ ಸರ್ವಮಕ್ಷಯಂ ಯಸ್ಮಾತ್ ತೇನೇಯಮಕ್ಷಯಾ ಸ್ಮೃತಾ ||

ಸ್ವಲ್ಪವಾಗಲಿ ಅಥವಾ ಬಹಳವಾಗಲಿ ಈ ದಿನದಂದು ಕೊಟ್ಟ ದಾನವು ಅಕ್ಷಯಫಲವನ್ನು ತಂದುಕೊಡುವುದರಿಂದ  ಆ ದಿನವನ್ನು ಅಕ್ಷಯವೆಂದು ಕರೆಯಲಾಗಿದೆ.

ಸ್ನಾತ್ವಾ ಹುತ್ವಾ ಚ ದತ್ತ್ವಾ ಚ ಜಪ್ತ್ವಾನಂತಫಲಂ ಲಭೇತ್ || ಈ ದಿವಸ ಮಾಡಿದ ಸ್ನಾನ, ಹೋಮ, ದಾನ ಮತ್ತು ಜಪಗಳಿಂದ ಅನಂತಪಟ್ಟು ಫಲವು ಲಭಿಸುವುದು.

ಅಕ್ಷಯ ತೃತೀಯಾ, ಸೋಮವಾರ ಅಥವಾ ಬುಧವಾರ ಮತ್ತು ರೋಹಿಣೀ ನಕ್ಷತ್ರ ಹೀಗೆ ಯೋಗವು ಬಂದರೇ ಅದನ್ನು ಬಹಳ ಶ್ರೇಷ್ಠವೆಂದು ಹೇಳಲಾಗಿದೆ.

ಅಕ್ಷಯ ತೃತೀಯಾ ವಿಶೇಷಗಳು

ಅಕ್ಷಯ ತೃತೀಯಾ ತ್ರೇತಾಯುಗದ ಆರಂಭದ ದಿನವಾಗಿದೆ, ಅದುದರಿಂದ ಇದು ಯುಗಾದಿ ತಿಥಿ ಎನ್ನಿಸಿಕೊಳ್ಳುತ್ತದೆ. ಪಿತೃಶ್ರಾದ್ಧ ಯುಗಾದಿ ತಿಥಿಗಳಂದು ಮಾಡುವುದು ಪಿತೃಗಳಿಗೆ ವಿಶೇಷ ಪ್ರೀತಿಕರ.

ಶ್ರೀಪರಶುರಾಮ ಜಯಂತೀ –

ಉಡುಪಿ-ಪಾಜಕ ಕ್ಷೇತ್ರದ ಶ್ರೀಪರಶುರಾಮ ದೇವರು

ದಿನವು ಶ್ರೀಹರಿಯ ಪರಶುರಾಮ ಅವತಾರದ ಜಯಂತಿಯನ್ನು ಆಚರಿಸಲಾಗುತ್ತದೆ. ಪರಶುರಾಮ ದೇವರ ಜನನ  ಸಾಯಂಕಾಲ ಸಮಯಕ್ಕಾದುದರಿಂದ ಜಯಂತಿಯನ್ನು ಪ್ರದೋಷವ್ಯಾಪಿನಿಯಾಗಿ ಗ್ರಹಿಸಬೇಕು. ದುಷ್ಟ ಶಿಕ್ಷೆ ಮತ್ತು ಶಿಷ್ಟ ರಕ್ಷಣೆಗಾಗಿ ಪರಮಾತ್ಮನು ತಾಳಿದ ಅವತಾರವಿದಾಗಿದೆ. ಕರ್ನಾಟಕದ ತುಳುನಾಡು, ಕೇರಳ, ಮಹಾರಾಷ್ಟ್ರದ ಕೊಂಕಣ ಪ್ರಾಂತಗಳಲ್ಲಿ ಪರಶುರಾಮ ಜಯಂತೀಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಶ್ರೀಹರಿಯ ಭಾರ್ಗವರಾಮಾವತಾರವು ಸರ್ವ ಬಾಧೆ, ಕಷ್ಟಗಳಿಂದ ನಮ್ಮನ್ನು ರಕ್ಷಿಸಲಿ ಎಂದು ಈ ದಿನ ಪರಶುರಾಮದೇವರ ಪೂಜಾದಿಗಳನ್ನು ಮಾಡಬೇಕು. ಮುಂದಿನ ಮಂತ್ರದಿಂದ ಸಾಯಂಕಾಲ ಅರ್ಘ್ಯವನ್ನು ಕೊಡಬೇಕು –
ಜಮದಗ್ನಿಸುತೋ ವೀರ ಕ್ಷತ್ರಿಯಾಂತಕರ ಪ್ರಭೋ |
ಗೃಹಾಣಾರ್ಘ್ಯಂ ಮಯಾ ದತ್ತಂ ಕೃಪಯಾ ಪರಮೇಶ್ವರ ||


ಗಂಧಲೇಪನ ಪೂಜೆ –

 ದ್ವಾರಕಾಧೀಶನಿಗೆ ಗಂಧಲೇಪನ ಪೂಜೆ

ಅಕ್ಷಯ ತೃತೀಯಾದಂದು ಶ್ರೀಹರಿಗೆ ಗಂಧಲೇಪನ ಸೇವೆಯನ್ನು ಮಾಡಲಾಗುತ್ತದೆ.
ಯಃ ಪಶ್ಯತಿ ತೃತೀಯಾಯಾಂ ಕೃಷ್ಣಂ ಚಂದನಭೂಷಿತಮ್ |
ವೈಶಾಖಸ್ಯ ಸಿತೇ ಪಕ್ಷೇ ಸ ಯಾತ್ಯಚ್ಯುತಮಂದಿರಮ್ ||
(ವಿಷ್ಣುಧರ್ಮೋತ್ತರ)
ಯಾರು ವೈಶಾಖ ಮಾಸದ ಶುಕ್ಲ ಪಕ್ಷ ತೃತೀಯಾದಂದು ಚಂದನದಿಂದ ಭೂಷಿತನಾದ ಶ್ರೀಕೃಷ್ಣನ ದರ್ಶನವನ್ನು ಮಾಡುತ್ತಾರೋ ಅವರು ಸದ್ಗತಿಯನ್ನು ಹೊಂದುತ್ತಾರೆ.

ಗೌರೀ ಪೂಜೆ –

ಈ ವ್ರತದ ಆರಂಭವು ಚೈತ್ರ ಶುಕ್ಲ ತೃತೀಯಾದಿಂದ ಆರಂಭವಾಗುತ್ತದೆ ಮತ್ತು ವೈಶಾಖ ಶುಕ್ಲ ತೃತೀಯಾದಂದು ಸಮರ್ಪಣೆ ಮಾಡಲಾಗುತ್ತದೆ. ಈ ದಿನ ಮಹಾದೇವರ ಸಹಿತ ಗೌರೀ (ಪಾರ್ವತಿ) ಪೂಜೆಯನ್ನು ಮಾಡುತ್ತಾರೆ. ಮಣ್ಣಿನಿಂದ ಮಾಡಿದ ಅಥವಾ ಲೋಹದ ಉಮಾಮಹೇಶ್ವರರ ಪ್ರತಿಮೆಗಳಿಗೆ ಷೋಡಶೋಪಾಚಾರ ಪೂಜೆ ಮಾಡಬೇಕು. ವಿಶೇಷವಾಗಿ ಗಂಧ, ವಿವಿಧ ಹೂವು-ಗರಿಕೆ, ಆಭರಣಗಳನ್ನು ಅರ್ಪಿಸಿ ಆರಾಧನೆಯನ್ನು ಮಾಡಬೇಕು. ದೇವಿಗೆ ಸೀರೆಯುಡಿಸಿ ಉಡಿ ತುಂಬಬೇಕು. ನಂತರ ಮುತ್ತೈದೆಯರನ್ನು ಕುಂಕುಮ-ಅರಿಷಿಣ, ಕಾಡಿಗೆ, ವಸ್ತ್ರ, ಹೂವುಗಳನ್ನು ಕೊಟ್ಟು ಪೂಜಿಸಬೇಕು. ಅಂತೆಯೇ ಕುಮಾರಿಯರನ್ನು ಸಹ ಪೂಜೆ ಮಾಡಬೇಕು. ಐಶ್ವರ್ಯ-ಸೌಭಾಗ್ಯ-ಸಂತಾನ-ಪತಿಪ್ರಾಪ್ತಿ ಮೊದಲಾದ ಅಭೀಷ್ಟಗಳ ಪ್ರಾಪ್ತಿಗಾಗಿ ಉಮಾಮಹೇಶ್ವರರ ಪ್ರಾರ್ಥನೆಯನ್ನು ಮಾಡಬೇಕು. ವ್ರತ ಸಮಾಪ್ತಿಯ ನಂತರ ಮಣ್ಣಿನ ಪ್ರತಿಮೆಗಳಾಗಿದ್ದರೆ ಜಲದಲ್ಲಿ ವಿಸರ್ಜಿಸಲಾಗುತ್ತದೆ, ಲೋಹ ಪ್ರತಿಮೆಯಾದರೆ ಬ್ರಾಹ್ಮಣರಿಗೆ ದಾನ ಕೊಡಲಾಗುತ್ತದೆ. ಹನ್ನೆರಡು ವರ್ಷ ಈ ವ್ರತದ ಆಚರಣೆಯನ್ನು ವಿಧಿಸಲಾಗಿದೆ. (ಇದೊಂದು ಶ್ರೇಷ್ಠ ವ್ರತ. ಈ ವ್ರತದ ಕುರಿತು ಮುಂದೊಮ್ಮೆ ವಿಸ್ತಾರವಾಗಿ ಬರೆಯಲಾಗುವುದು)

ದಾನಗಳು –

ಈ ದಿನ ಯಾವ ದಾನ ಮಾಡಿದರೂ ಅದರಿಂದ ಅಕ್ಷಯಫಲ ಬರುತ್ತದೆ. ಕೆಲವು ವಿಶೇಷ ದಾನಗಳನ್ನು ಈ ದಿನ ವಿಧಾನ ಮಾಡಲಾಗಿದೆ. ವೈಶಾಖ ಮಾಸದ ಬಿಸಿಲಿನ ತಾಪದ ಉಪಶಮನಕ್ಕಾಗಿ ತೆಳುವಾದ ವಸ್ತ್ರಗಳು, ಕೊಡೆ, ಬೀಸಣಿಕೆ, ಪಾದರಕ್ಷೆಗಳನ್ನು ದಾನ ಮಾಡಬಹುದು. ಪಾನಕ, ಏಳನೀರು, ಕಬ್ಬಿನ ರಸ, ಹಣ್ಣುಗಳು ಇವುಗಳನ್ನು ದಾನಮಾಡಬಹುದು. ಜವೆಗೋದಿ ಅಥವಾ ಯವದ ದಾನವು ಇಂದು ಬಹಳ ವಿಶೇಷ. ಅಕ್ಷಯ ತೃತಿಯಾದಂದು ಯವದಿಂದ ಹೋಮವನ್ನು ಸಹ ಮಾಡುತ್ತಾರೆ.
ಯವಗೋಧೂಮಚಣಕಾನ್ ಸಕ್ತು ದಧ್ಯೋದನಂ ತಥಾ |
ಇಕ್ಷುಕ್ಷೀರವಿಕಾರಾಂಶ್ಚ ಹಿರಣ್ಯಂ ಚ ಸ್ವಶಕ್ತಿತಃ ||
ಉದಕುಂಭಾನ್ ಸಕರಕಾನ್ ಸನ್ನಾನ್ ಸರ್ವರಸೈಃ ಸಹ |
ಗ್ರೈಷ್ಮಿಕಂ ಸರ್ವಮೇವಾತ್ರ ಸಸ್ಯಂ ದಾನೇ ಪ್ರಶಸ್ಯತೇ ||
(ಭವಿಷ್ಯೋತ್ತರ ಪುರಾಣ)
ಜವೆಗೋದಿ, ಗೋದಿ, ಕಡಲೆ, ಹುರಿಹಿಟ್ಟು (ಸಕ್ತು), ಮೊಸರನ್ನ, ಕಬ್ಬಿನ ರಸ, ಹಾಲಿನಿಂದ ಮಾಡಿದ ಪದಾರ್ಥಗಳು, ಚಿನ್ನ, ಜಲಕುಂಭ, ಅನ್ನ ಮತ್ತು ಗ್ರೀಷ್ಮಋತುವಿನಲ್ಲಿ ಬೆಳೆಯುವಂತಹ ಧಾನ್ಯಗಳು – ಈ ವಸ್ತುಗಳನ್ನು ದಾನ ಮಾಡಬೇಕು. ಪಿತೃಶ್ರಾದ್ಧ ಬ್ರಾಹ್ಮಣ ಭೋಜನಗಳನ್ನು ಮಾಡಿಸಬೇಕು.

ಜಲಕುಂಭ ಅಥವಾ ಧರ್ಮಘಟ ದಾನ –

ಈ ದಾನವು ದೇವತೆಗಳ ಮತ್ತು ಪಿತೃಗಳ ಪ್ರೀತಿಗಾಗಿ ಮಾಡಲಾಗುತ್ತದೆ. ಲೋಹದ ಅಥವಾ ಮಣ್ಣಿನ ಘಟದಲ್ಲಿ ನೀರು ತುಂಬಿಸಿ ಗಂಧ, ತುಳಸಿ, ಹೂವು, ಎಳ್ಳು ಇವುಗಳನ್ನು ಹಾಕಿ ಯೋಗ್ಯ ಬ್ರಾಹ್ಮಣನಿಗೆ ದಾನ ಮಾಡಬೇಕು. ಬ್ರಾಹ್ಮಣನಿಗೆ ಭೋಜನವನ್ನು ಮಾಡಿಸಬೇಕು ಅಥವಾ ಭೋಜನ ಸಾಮಗ್ರಿಗಳನ್ನು ಫಲ-ಸದಕ್ಷಿಣಾಕವಾಗಿ ಘಟದ ಜೊತೆಗೆ ದಾನಮಾಡಬೇಕು. ಈ ದಾನದಿಂದ ಸಕಲ ದೇವತೆಗಳಿಗೆ ಮತ್ತು ಪಿತೃಗಳಿಗೆ ಸಂತೋಷ ಉಂಟಾಗುತ್ತದೆ ನಮ್ಮ ಸಕಲ ಬಯಕೆಗಳು ಈಡೇರುತ್ತವೆ.
ದಾನ ಮಂತ್ರ –
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನಾತ್-ಸಕಲಾ ಮಮ ಸಂತು ಮನೊರಥಾಃ ||
(ದೇವತೆಗಳ ಉದ್ದೇಶ್ಯವಾಗಿ)
ಏಷ ಧರ್ಮಘಟೋ ದತ್ತೋ ಬ್ರಹ್ಮವಿಷ್ಣುಶಿವಾತ್ಮಕಃ |
ಅಸ್ಯ ಪ್ರದಾನಾತ್-ತೃಪ್ಯಂತು ಪಿತರೋಪಿ ಪಿತಾಮಹಾಃ ||
ಗಂಧೋದಕತಿಲೈರ್ಮಿಶ್ರಂ ಸಾನ್ನಂ ಕುಂಭಂ ಫಲಾನ್ವಿತಮ್ | 
ಪಿತೃಭ್ಯಃ ಸಂಪ್ರದಾಸ್ಯಾಮಿ ಅಕ್ಷಯ್ಯಮುಪತಿಷ್ಠತು ||
(ಪಿತೃಗಳ ಉದ್ದೇಶ್ಯವಾಗಿ)

ಅಕ್ಷಯ ತೃತೀಯಾ ದಿನದಂದು ವಿಶೇಷವಾಗಿ ದಾನ, ಜಪ, ಪಾರಾಯಣಾದಿಗಳನ್ನು ಮಾಡಿ ಭಗವಂತನ ಕೃಪೆಯಿಂದ ಅಕ್ಷಯಫಲವನ್ನು ಪಡೆಯೋಣ.

ಮಕರ ಸಂಕ್ರಮಣ – 14 ಜನೇವರಿ 2017

ದಿನಾಂಕ 14 ಶನಿವಾರದಂದು ಮಕರ ಸಂಕ್ರಮಣ ಮತ್ತು ಉತ್ತರಾಯಣ ಪುಣ್ಯಕಾಲದ ಆಚರಣೆ. ದಿನಾಂಕ 14 ಜನೆವರೀ 2017 ಶನಿವಾರದಂದು ಪ್ರಾತಃಕಾಲ 7 ಗಂಟೆ 38 ನಿಮಿಷಕ್ಕೆ ಮಕರ ಸಂಕ್ರಾಂತಿಯು ಇರುತ್ತದೆ. ಸಂಕ್ರಮಣ ಪರ್ವಕಾಲವು ಬೆಳಿಗ್ಗೆ 7-38 ರಿಂದ ಮಧ್ಯಾಹ್ನ 3-38 ರವರೆಗೆ ಇರುತ್ತದೆ. ಸಂಕ್ರಮಣ ಪರ್ವಕಾಲದಲ್ಲಿ ಸ್ನಾನ-ದಾನಾದಿಗಳು ನೂರುಪಟ್ಟು ಪುಣ್ಯಪ್ರದ.

ಸೂರ್ಯನು ಒಂದು ರಾಶಿಯಿಂದ ಮುಂದಿನ ರಾಶಿಗೆ ಪ್ರವೇಶಿಸುವುದನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಸೂರ್ಯನು ಧನುರಾಶಿಯಿಂದ ಮಕರರಾಶಿಗೆ ಪ್ರವೇಶಮಾಡುವ ಪರ್ವಕಾಲವನ್ನು ಮಕರ ಸಂಕ್ರಮಣವೆಂದು ಕರೆಯಲಾಗುತ್ತದೆ. ಶಾಸ್ತ್ರಗಳಲ್ಲಿ ಈ ಸಂಕ್ರಮಣವನ್ನು “ಉದಗಯನ ಅಥವಾ ಉತ್ತರಾಯಣ ಸಂಕ್ರಾಂತಿ” ಎಂದು ಸಹ ಕರೆಯಲಾಗಿದೆ. ಕರ್ಕ ಮತ್ತು ಮಕರ ಸಂಕ್ರಮಣಗಳನ್ನು ಆಯನ ಸಂಕ್ರಾಂತಿಗಳೆಂದು ಧರ್ಮಶಾಸ್ತ್ರಕಾರರು ಗುರುತಿಸಿರುತ್ತಾರೆ. ಧಾರ್ಮಿಕ ಆಚರಣೆಗಳಿಗಾಗಿ ಮಕರ ಸಂಕ್ರಮಣವನ್ನು ಉತ್ತರಾಯಣದ ಆರಂಭವೆಂದು ಕರೆಯಲಾಗುತ್ತದೆ. ಉತ್ತರಾಯಣ ಸಂಕ್ರಮಣದ ಪೂರ್ವಾಪರ ಮೂರು ದಿನಗಳನ್ನು ಪುಣ್ಯಕಾಲವೆನ್ನಲಾಗುತ್ತದೆ. ಈ ದಿನಗಳು (ಸಂಕ್ರಾಂತಿ, ಹಿಂದಿನ ದಿವಸ - ಭೋಗಿ, ಮಾರನೇಯ ದಿವಸ - ಕಿಂಕ್ರಾಂತಿ) ಯಾವುವೇ ಶುಭಕಾರ್ಯ, ಶೋಡಷ ಸಂಸ್ಕಾರಾದಿ ಕರ್ಮಕಾಂಡಾದಿಗಳಿಗೆ ವರ್ಜ್ಯವಾಗಿವೆ. ಈ ದಿನ ಸೂರ್ಯನಾರಾಯಣನನ್ನು ಕುರಿತು ಜಪ, ಪೂಜೆ, ದಾನಾದಿಗಳನ್ನು ಮಾಡುವುದು ಧರ್ಮಶಾಸ್ತ್ರರೀತ್ಯಾ ವಿಹಿತವಾಗಿದೆ.

ರವೇಃ ಸಂಕ್ರಮಣಂ ರಾಶೌ ಸಂಕ್ರಾಂತಿರಿತಿ ಕಥ್ಯತೇ |
ಸ್ನಾನ-ದಾನ-ಜಪ-ಶ್ರಾದ್ಧ-ಹೋಮಾದಿಷು ಮಹಾಫಲಾ ||
ಒಂದು ರಾಶಿಯಿಂದ ಮುಂದಿನ ರಾಶಿಗೆ ರವಿಯ ಪ್ರವೇಶವನ್ನು ಸಂಕ್ರಮಣವೆಂದು ಕರೆಯಲಾಗುತ್ತದೆ. ಆ ಮುಹೂರ್ತದಲ್ಲಿ ಸ್ನಾನ, ದಾನ, ಜಪ, ಶ್ರಾದ್ಧ, ಹೋಮಾದಿ ಆಚರಣೆಗಳನ್ನು ಮಾಡಿದರೆ ಮಹಾಫಲ ಪ್ರಾಪ್ತವಾಗುತ್ತದೆ.

ಸಂಕ್ರಾತಿಯಂದು ಮಾಡಿದ ದಾನ ಅತ್ಯಂತ ಫಲಪ್ರದವಾಗಿದೆ, ಇದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ –
ಸಂಕ್ರಾಂತೌ ಯಾನಿ ದತ್ತಾನಿ ಹವ್ಯಕವ್ಯಾನಿ ದಾತೃಭಿಃ |
ತಾನಿ ನಿತ್ಯಂ ದದಾತ್ಯರ್ಕಃ ಪುನರ್ಜನ್ಮನಿಜನ್ಮನಿ ||
ಸಂಕ್ರಾಂತಿಯ ಪುಣ್ಯಕಾಲದಲ್ಲಿ ಮಾಡಲ್ಪಟ್ಟ ಹೋಮ, ಶ್ರಾದ್ಧ ಮತ್ತು ದಾನಗಳಿಂದ ಸೂರ್ಯನು ಪ್ರೀತನಾಗುತ್ತಾನೆ. ಆ ದಿನ ಕೊಟ್ಟ ದಾನ ಪದಾರ್ಥಗಳನ್ನು ಸೂರ್ಯನು ಜನ್ಮಜನ್ಮಾಂತರಗಳಲ್ಲಿಯೂ ನಿತ್ಯವಾಗಿ ನಮಗೆ ಅನುಗ್ರಹಿಸುತ್ತಾನೆ.
ಉತ್ತರಾಯಣ ಸಂಕ್ರಾಂತಿಗಳಲ್ಲಿ ಬ್ರಾಹ್ಮಣರ ಕುರಿತು ವಸ್ತ್ರದಾನವನ್ನು ಮಹಾಫಲ ಪ್ರದವೆಂದು ಹೇಳಲಾಗಿದೆ, ಶೀಘ್ರ ರೋಗಮುಕ್ತಿಗಾಗಿ ತಿಲವೃಷಭ-ತಿಲಧೇನು ದಾನವನ್ನು ಸೂಚಿಸಲಾಗಿದೆ.

ಸಂಕ್ರಾಂತಿಯ ಪುಣ್ಯಕಾಲದಲ್ಲಿ ಸ್ನಾನವು ಪುಣ್ಯಸ್ನಾನವೆನಿಸಿಕೊಳ್ಳುತ್ತದೆ ಇದರಿಂದ ಆಯುಷ್ಯ ಮತ್ತು ಆರೋಗ್ಯ ವೃದ್ಧಿಯಾಗುತ್ತದೆ. ಪುಣ್ಯಕಾಲದಲ್ಲಿ ತಿಲಮಿಶ್ರಿತ ಜಲದಿಂದ ಸ್ನಾನ ಮಾಡಿದಲ್ಲಿ ಚರ್ಮವ್ಯಾಧಿಗಳು ಪರಿಹಾರವಾಗುತ್ತವೆ –
ರವಿಸಂಕ್ರಮಣೇ ಪ್ರಾಪ್ತೇ ನ ಸ್ನಾಯಾದ್ ಯಸ್ತು ಮಾನವಃ |
ಚಿರಕಾಲಿಕರೋಗೀ ಸ್ಯಾನ್ನಿರ್ಧನಶ್ಚೈವ ಜಾಯತೇ ||
ರವಿಯ ಸಂಕ್ರಮಣವು ಇದ್ದಾಗ ಯಾವ ಮಾನವನು ಪುಣ್ಯಸ್ನಾನವನ್ನು ಮಾಡುವುದಿಲ್ಲವೋ ಅವನು ಚಿರಕಾಲದ ವರೆಗೆ ರೋಗಿಷ್ಟನಾಗುತ್ತಾನೆ ಮತ್ತು ನಿರ್ಧನನಾಗುತ್ತಾದೆ.


ನಮ್ಮ ನಾಡಿನಾದ್ಯಂತ ಸಂಕ್ರಮಣವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಎಳ್ಳು ಬೀರುವ ಆಚರಣೆ ಕರ್ನಾಟಕದ ವಿಶಿಷ್ಠ ಆಚರಣೆಗಳಲ್ಲಿ ಒಂದು. ಎಳ್ಳು ಮಿಶ್ರಿತ ನೀರಿನಿಂದ ಸ್ನಾನ, ಎಳ್ಳಿನಿಂದ ತರ್ಪಣಗಳು ಸಂಕ್ರಮಣಕ್ಕೆ ವಿಹಿತ ಕರ್ಮಗಳು. ಈ ದಿನ ಎಳ್ಳು, ಬೆಲ್ಲ, ಕೊಬ್ಬರಿ, ಕಡಲೇಕಾಯಿ, ಹುರಿದಕಡಲೆ ಇವುಗಳ ಮಿಶ್ರಣವನ್ನು ದೇವರಿಗೆ ಸಮರ್ಪಿಸಿ ಗುರು ಹಿರಿಯರಿಗೆ ಕೊಟ್ಟು ತಾವೂ ತೆಗೆದುಕೊಳ್ಳಬೇಕು. ಎಳ್ಳು ಮತ್ತು ಬೆಲ್ಲದ ಈ ಮಿಶ್ರಣಕ್ಕೆ ಆಯುರ್ವೇದದಲ್ಲಿಯೂ ಸಹ ವಿಶೇಷವಾಗಿ ಮಹತ್ವವನ್ನು ಹೇಳಲಾಗಿದೆ. ಈ ದಿನ ಚಿಕ್ಕ ಮಕ್ಕಳಿಗೆ ಎಳ್ಳಿನಿಂದ ಎರೆಯುವ ಸಂಪ್ರದಾಯವೂ ಇದೆ.


ಪೌರಾಣಿಕವಾಗಿ ಸಂಕ್ರಾಂತಿಯನ್ನು ಒಂದು ದೇವಿಯನ್ನಾಗಿ ಚಿತ್ರಿಸಲಾಗಿದೆ. ಸಂಕ್ರಾಂತಿ ಮಹಾತ್ಮೆಯ ಪ್ರಕಾರ ಹಿಂದೊಮ್ಮೆ ಈ ದೇವಿಯು ಸಂಕ್ರಮಣದ ದಿನದಂದು ಸಂಕರಾಸುರನೆಂಬ ಅಸುರನನ್ನು ಸಂಹಾರಮಾಡಿ ಲೋಕಕ್ಕೆಲ್ಲ ಸುಖವನ್ನುಂಟು ಮಾಡಿದಳು. ಸಂಕ್ರಾಂತಿಯ ಮಾರನೇಯ ದಿನ ದೇವಿಯು ಕಿಂಕರಾಸುರನ ವಧೆ ಮಾಡಿದಳು, ಆದ್ದರಿಂದ ಆ ದಿನವನ್ನು ಕಿಂಕ್ರಾಂತಿ ಎಂದು ಕರೆಯಲಾಗುತ್ತದೆ. ಆದ್ದರಿಂದ ಸಂಕ್ರಾಂತಿಯು ಅಸುರ ಮತ್ತು ದುಷ್ಟ ಶಕ್ತಿಗಳ ನಾಶದ ಪ್ರತೀಕವಾಗಿದೆ. ದೂರ್ವಾಸ ಮಹರ್ಷಿಯ ಉಪದೇಶದಂತೆ ದ್ರೋಣಾಚಾರ್ಯರ ಪತ್ನಿಯಾದ ಕೃಪಿಯು ಸಂಕ್ರಾಂತಿಯ ವೃತವನ್ನು ಆಚರಿಸಿ ಪುತ್ರನನ್ನು ಮತ್ತು ಸಂಪತ್ತನ್ನು ಪಡೆದಳು, ಆದ್ದರಿಂದ ಸಂಕ್ರಾಂತಿಯು ಸಂತಾನ ಮತ್ತು ಸಂಪತ್ಪ್ರದಾಯಕವಾಗಿದೆ. ಸಂಕ್ರಮಣವನ್ನು ದೈವಪ್ರತೀಕವೆಂದು ಕಲ್ಪಿಸಿ ಶಕ್ತಿ ದೇವತೆಯ ರೂಪದಲ್ಲಿ ಪಂಚಾಂಗಗಳಲ್ಲಿ ಕೊಡಲಾಗಿರುತ್ತದೆ. ಸಂಕ್ರಾಂತಿಯು ಯಾವ ದಿಕ್ಕಿನಿಂದ ಬಂತು, ಯಾವ ದಿಕ್ಕಿನೆಡೆಗೆ ಮುಖ ಮಾಡಿದೆ, ಯಾವ ವಾಹನ-ಉಪವಾಹನವನ್ನು ಹೊಂದಿದೆ, ಯಾವ ಆಯುಧವನ್ನು ಹಿಡಿದೆದೆ ಇತ್ಯಾದಿ ವಿಷಯಗಳನ್ನು ಪಂಚಾಂಗಗಳಲ್ಲಿ ಕೊಡಲಾಗುತ್ತದೆ. ಸಂಕ್ರಾಂತಿಯ ದಿನ ಸಂಕ್ರಾಂತಿಯ ಈ ಸ್ವರೂಪವನ್ನು ಜ್ಯೋತಿಷ್ಯರಿಂದ ಶ್ರವಣ ಮಾಡಬೇಕು. ಈಗ ಪ್ರಸಕ್ತ ಜನೆವರಿ 14 ರಂದು ಬರಲಿರುವ ಮಕರ ಸಂಕ್ರಮಣದ ಲಕ್ಷಣ ಮತ್ತು ಫಲಗಳನ್ನು ನೋಡೋಣ.

ಶ್ರೀ ಗಣೇಶಾಯ ನಮಃ || ನವಗ್ರಹಗಳಿಗೆ, ಬ್ರಹ್ಮ ರುದ್ರ ವಿಷ್ಣು ತ್ರಿಮೂರ್ತಿಗಳಿಗೆ ವಂದಿಸಿ ಸಂಕ್ರಮಣ ಫಲವನ್ನು ಕೆಳುವುದು.

ತಿಲಸ್ನಾಯೀ ತಿಲೋದ್ವರ್ತೀ ತಿಲಹೋಮೀ ತಿಲೋದಕೀ |
ತಿಲಭುಕ್ ತಿಲದಾತಾ ಚ ಷಟ್‍ತಿಲಾಃ ಪಾಪನಾಶಕಾಃ ||
ತಿಲ (ಎಳ್ಳು) ಮಿಶ್ರಿತ ಜಲದಿಂದ ಸ್ನಾನ, ತಿಲವನ್ನು ಶರೀರಕ್ಕೆ ಲೇಪಿಸಿಕೊಳ್ಳುವುದು, ತಿಲದಿಂದ ಹೋಮ, ತಿಲತರ್ಪಣ, ತಿಲ ಭಕ್ಷಣ ಮತ್ತು ತಿಲದ ದಾನ – ಈ ರೀತಿ ತಿಲಕ್ಕೆ ಸಂಬಂಧಿತ ಆರು ಕಾರ್ಯಗಳು ಸಂಕ್ರಮಣದಲ್ಲಿ ಸಕಲ ಪಾಪನಾಶಕವಾಗಿರುತ್ತದೆ.

ಶ್ರೀಶಾಲಿವಾಹನ ಶಕೆ 1938 ದುರ್ಮುಖನಾಮ ಸಂವತ್ಸರ ಉತ್ತರಾಯಣ, ಪೌಷ ಕೃಷ್ಣ ದ್ವಿತೀಯಾ, ಶನಿವಾರ, ಆಶ್ಲೇಷಾ ನಕ್ಷತ್ರ, ಪ್ರೀತಿ ಯೋಗ, ಗರಜ ಕರಣ, ದಿನಾಂಕ 14 ಜನೆವರೀ 2017 ರಂದು ಪ್ರಾತಃಕಾಲ 7 ಗಂಟೆ 38 ನಿಮಿಷಕ್ಕೆ (ಸಂಕ್ರಾಂತಿ ಪ್ರವೇಶ) ನಿರಯನ ಸೂರ್ಯನ ಪ್ರವೇಶವು ಮಕರರಾಶಿಯಲ್ಲಿ ಆಗುತ್ತದೆ. ಸಂಕ್ರಾಂತಿಯ ಪುಣ್ಯಕಾಲವು ಮಧ್ಯಾಹ್ನ 3 ಗಂಟೆ 38 ನಿಮಿಷದ ವರೆಗೆ ಇರುತ್ತದೆ.

ಸಂಕ್ರಾಂತಿಯ ಸ್ವರೂಪ – ಸಂಕ್ರಮಣವು ಗರಜ ಕರಣದಲ್ಲಿ ಆಗುವುದರಿಂದ ವಾಹನ ಆನೆಯಾಗಿರುತ್ತದೆ ಮತ್ತು ಉಪವಾಹನವು ಕತ್ತೆಯಾಗಿರುತ್ತದೆ. ಸಂಕ್ರಾಂತಿಯು ಕೆಂಪುಬಣ್ಣದ ವಸ್ತ್ರಗಳನ್ನು ಉಟ್ಟಿರುತ್ತಾಳೆ, ಕೈಯಲ್ಲಿ ಧನುಷ್ಯವನ್ನು ಆಯುಧವಾಗಿ ಧರಿಸಿರುತ್ತಾಳೆ. ಅವಳು ಗೋರೋಚನದ ತಿಲಕವನ್ನು ಧಾರಣ ಮಾಡಿರುತ್ತಾಳೆ. ಪ್ರೌಢವಯಸ್ಕಳಾದ ಸಂಕ್ರಾಂತಿಯು ಕುಳಿತುಕೊಂಡಿರುತ್ತಾಳೆ. ಸುವಾಸಿತ ಬಿಲ್ವಪುಷ್ಪವನ್ನು ಕೈಯಲ್ಲಿ ಹಿಡಿದುಕೊಂಡಿದ್ದಾಳೆ. ಹಾಲಿನ ಭಕ್ಷಣೆಯನ್ನು ಮಾಡುತ್ತಿದ್ದಾಳೆ. ಅವಳದು ಪಶುಜಾತಿಯಾಗಿದೆ. ಆಭೂಷಣಾರ್ಥವಾಗಿ ಗೋಮೇಧರತ್ನವನ್ನು ಧರಿಸಿರುತ್ತಾಳೆ.

ಸಂಕ್ರಾಂತಿಯು ದಕ್ಷಿಣ ದಿಕ್ಕಿನಿಂದ ಉತ್ತರ ದಿಕ್ಕಿನ ಕಡೆಗೆ ಹೊರಟಿದ್ದಾಳೆ, ಈಶಾನ್ಯ ದಿಕ್ಕಿನ್ನು ನೋಡುತ್ತಿರುತ್ತಾಳೆ. ಸಂಕ್ರಾಂತಿಯು ಯಾವ ದಿಕ್ಕಿನಿಂದ ಬರುತ್ತದೆಯೋ ಆ ದಿಕ್ಕಿನ ಪ್ರದೇಶಗಳ ಜನರಿಗೆ ಸಮೃದ್ಧಿ-ಸುಖ-ಲಾಭ ಪ್ರಾಪ್ತಿಯಾಗುತ್ತದೆ, ಯಾವ ದಿಕ್ಕಿನಕಡೆಗೆ ಹೊರಡುತ್ತದೆಯೋ ಆ ದಿಕ್ಕಿನ ಪ್ರದೇಶದ ಜನರಿಗೆ ಉತ್ಪಾತ-ದುಃಖ-ನಷ್ಟ ಪ್ರಾಪ್ತಿಯಾಗುತ್ತದೆ. ಸಂಕ್ರಾಂತಿಯು ಧಾರಣ ಮಾಡಿರುವ ವಸ್ತುಗಳು ದುಬಾರಿಯಾಗುತ್ತವೆ.

ಸಂಕ್ರಾಂತಿ ಕಾಲದಲ್ಲಿ ವರ್ಜ್ಯ ಕರ್ಮಗಳು –
ಸಂಕ್ರಮಣ ಕಾಲದಲ್ಲಿ ಕಠೋರವಾಗಿ ಮಾತನಾಡುವುದು, ಸಿಟ್ಟು, ಜಗಳಗಳನ್ನು ಮಾಡಬಾರದು. ಮಾಡಿದ್ದೇ ಆದರೆ ವರ್ಷ ಪೂರ್ಣ ಕಲಹವೇ ಫಲರೂಪವಾಗಿ ಪ್ರಾಪ್ತವಾಗುತ್ತದೆ, ಆದ್ದರಿಂದ ಶಾಂತಿ ಮತ್ತು ಸಂಯಮಿಗಳಾಗಿ ವರ್ತಿಸಬೇಕು. ಗಿಡ ಮರಗಳನ್ನು ಕತ್ತರಿಸುವುದು, ಹುಲ್ಲು ತೆಗೆಯುವುದು ಮಾಡಬಾರದು. ಸ್ತ್ರೀಭೋಗ ಕಾಮವಿಷಯಗಳನ್ನು ತ್ಯಾಗ ಮಾಡಬೇಕು. ಆಕಳು, ಎಮ್ಮೆ, ಕುರಿ ಮೊದಲಾದವುಗಳ ನೊಗ, ಹಗ್ಗಗಳನ್ನು ಇಳಿಸಬಾರದು. ಸಂಕ್ರಮಣಕಾಲದಲ್ಲಿ ಅಧ್ಯಯನಾದಿಗಳನ್ನು ಮಾಡಬಾರದು. ವಿವಾಹಾದಿ ಶುಭಕಾರ್ಯಗಳನ್ನು ಮಾಡಬಾರದು. ಗ್ರಹಪ್ರವೇಶ, ಹೊಸ ವಸ್ತುಗಳ ಖರೀದಿಯನ್ನು ಮಾಡಬಾರದು.

ಸಂಕ್ರಾಂತಿಯ ಹಿಂದಿನ ದಿನವನ್ನು ಭೋಗೀ ಎಂದು ಕರೆಯುತ್ತಾರೆ, ಈ ಹಬ್ಬವನ್ನು ವಿಶೇಷವಾಗಿ ಸ್ತ್ರೀಯರು ಆಚರಿಸುತ್ತಾರೆ. ಸಂಕ್ರಾಂತಿಯ ಮಾರನೇಯ ದಿನವನ್ನು ಕರಿದಿನವೆಂದೂ, ಕೆಲವೆಡೆ ಕಿಂಕ್ರಾಂತಿಯೆಂದೂ ಕರೆಯುವುದುಂಟು. ಈ ದಿನವು ಅಶುಭವಾಗಿದ್ದು ಯಾವುದೇ ಶುಭ ಕಾರ್ಯಕ್ಕೆ, ಹೊಸ ಕಾರ್ಯಾರಂಭಕ್ಕೆ, ಖರೀದಿ, ವ್ಯಾಪಾರ, ವ್ಯವಹಾರಾದಿಗಳಿಗೆ ಯೋಗ್ಯವಲ್ಲ.

ಸಂಕ್ರಮಣದ ದಾನಗಳು –
ಸಂಕ್ರಾಂತಿಯ ಪುಣ್ಯಕಾಲದಲ್ಲಿ ಹೊಸ ಪಾತ್ರೆಗಳು, ಗೋಗ್ರಾಸ, ತಿಲ ಸಹಿತ ಪಾತ್ರ, ಎಳ್ಳು, ಬೆಲ್ಲ, ಉಣ್ಣೆಯ ಬಟ್ಟೆಗಳು, ತುಪ್ಪ, ಚಿನ್ನ, ಭೂದಾನ, ಆಕಳು, ವಸ್ತ್ರ ಇತ್ಯಾದಿಗಳನ್ನು ಸದಕ್ಷಿಣಾಕವಾಗಿ ಬ್ರಾಹ್ಮಣರಿಗೆ ದಾನಮಾಡಬೇಕು. ಈ ದಿನ ಮುತ್ತೈದೆಯರಿಗೆ ಮಂಗಳ ದ್ರವ್ಯಗಳನ್ನು, ವಸ್ತ್ರದಾನವನ್ನು ಸಹ ವಿಶೇಷವಾಗಿ ಮಾಡಲಾಗುತ್ತದೆ.

ಜನ್ಮನಕ್ಷತ್ರಗಳ ಮೇಲಿಂದ ಸಂಕ್ರಮಣದ ಫಲ –
ಪಂಥಾ – ಮಘಾ, ಪೂರ್ವಾ, ಉತ್ತರಾ. ಫಲ – ಪ್ರವಾಸ ಯೋಗ.
ಭೋಗ – ಹಸ್ತಾ, ಚಿತ್ರಾ, ಸ್ವಾತೀ, ವಿಶಾಖಾ, ಅನುರಾಧಾ, ಜ್ಯೇಷ್ಠಾ. ಫಲ – ಸುಖ ಭೋಗ.
ವ್ಯಥಾ – ಮೂಲಾ, ಪೂರ್ವಾಷಾಢಾ, ಉತ್ತರಾಷಾಢಾ. ಫಲ – ಶರೀರ ಪೀಡೆ.
ವಸ್ತ್ರಮ್ – ಶ್ರವಣಾ, ಧನಿಷ್ಠಾ, ಶತತಾರಕಾ, ಪೂರ್ವಾಭಾದ್ರಪದ, ಉತ್ತರಾಭಾದ್ರಪದ, ರೇವತೀ. ಫಲ – ವಸ್ತ್ರಾದಿ ಆಭೂಷಣಗಳ ಪ್ರಾಪ್ತಿ.
ಹಾನಿ – ಅಶ್ವಿನೀ, ಭರಣೀ, ಕೃತ್ತಿಕಾ. ಫಲ – ದ್ರವ್ಯ ಹಾನಿ.
ವಿಪುಲಂ ಧನಮ್ – ರೋಹಿಣೀ, ಮೃಗ, ಆರ್ದ್ರಾ, ಪುನರ್ವಸು, ಪುಷ್ಯ, ಆಶ್ಲೇಷಾ. ಫಲ – ಧನ ಪ್ರಾಪ್ತಿ.

ಈ ರೀತಿ ಸಂಕ್ರಮಣ ಫಲ ಶ್ರವಣಮಾಡುವುವರ ಮತ್ತು ಯೋಗ್ಯ ದಾನಾದಿಗಳನ್ನು ಮಾಡುವವರ ಮನೆಯಲ್ಲಿ ಎಲ್ಲ ಸೌಭಾಗ್ಯ, ಸುಖ, ಶಾಂತಿ, ಲಕ್ಷ್ಮೀಯು ಸ್ಥಿರವಾಗಿ ನೆಲೆಸಿ ಅರೋಗ್ಯ, ಸಂಪತ್ತು, ಅನುರೂಪ ಪತಿ-ಪತ್ನಿ, ಸಂತಾನ, ಪಶುಭಾಗ್ಯ, ಬಂಧುಗಳ ಭಾಗ್ಯಗಳು ಲಭಿಸುತ್ತವೆ. ಸಂಕ್ರಮಣ ಪರ್ವಕಾಲದಲ್ಲಿ ಸ್ನಾನದಾನಾದಿಗಳು ನೂರುಪಟ್ಟು ಪುಣ್ಯಪ್ರದ. ಮಕರ ಸಂಕ್ರಮಣದ ದಿನ ಸೂರ್ಯನಾರಾಯಣನ ಉಪಾಸನೆ, ದೈವಕಾರ್ಯಗಳು, ಜಪ, ತರ್ಪಣ, ಪಾರಾಯಣಾದಿಗಳು ಅತ್ಯಂತ ಪುಣ್ಯಪ್ರದಗಳಾಗಿವೆ.

ಆದಿತ್ಯ ಹೃದಯ ಸ್ತೋತ್ರ

ಆದಿತ್ಯಹೃದಯ ಅಮೋಘವಾದ ಸ್ತೋತ್ರ. ಶ್ರೀರಾಮಚಂದನಿಗೆ ಅಗಸ್ತ್ಯ ಮಹರ್ಷಿಗಳು ಉಪದೇಶಿಸಿದ ದಿವ್ಯ ಸ್ತೋತ್ರವಿದು. ಪಾರಾಯಣದಿಂದ ಆಯುರಾರೋಗ್ಯ ಅಭಿವೃದ್ಧಿ, ಎಲ್ಲ ಕಾರ್ಯಗಳಲ್ಲಿ ಜಯ, ಶತ್ರುಜಯ, ಸರ್ವ ಆಪತ್ತುಗಳ ನಿವಾರಣೆಯಾಗುತ್ತದೆ. ಸೂರ್ಯಾನುಗ್ರಹವಿದ್ದರೆ ಎಲ್ಲ ಗ್ರಹಬಾಧೆಗಳ ನಿವಾರಣೆ.

ಸೂರ್ಯ ಪ್ರತ್ಯಕ್ಷ ದೇವತೆ. ವೇದ ಗರ್ಭವೆನಿಸಿದ ಗಾಯತ್ರೀ ಮಂತ್ರದ ಪ್ರತಿಪಾದ್ಯ ದೇವತೆ. ಭಾರತೀಯ ವೈದಿಕ ಸಂಸ್ಕೃತಿಯ ಆಧಾರ ಸ್ವರೂಪ. ನಮ್ಮ ಎಲ್ಲ ಕರ್ಮಗಳು ಸೂರ್ಯನನ್ನು ಅನುಸರಿಸಿಯೇ ನಡೆಯುತ್ತವೆ, ಎಲ್ಲದಕ್ಕೂ ಸೂರ್ಯನು ಪ್ರತ್ಯಕ್ಷ ಸಾಕ್ಷಿಯಾಗಿರುತ್ತಾನೆ. ಆದುದರಿಂದ ಸೂರ್ಯನನ್ನು ಶಾಸ್ತ್ರಗಳು ವಿಶ್ವದ ಕಣ್ಣು (ಜಗದೇಕ ಚಕ್ಷುಃ) ಎಂದು ಕರೆದಿವೆ. ಸಮಸ್ತ ಜೀವ ಜಡಾತ್ಮಕ ಜಗತ್ತಿನ ಎಕೈಕ ಪ್ರೇರಕ ಶಕ್ತಿಯು ಸೂರ್ಯ. ಸೂರ್ಯನು ಜಗತ್ತಿನ ಆತ್ಮನೆಂದು ಋಗ್ವೇದ ಕೊಂಡಾಡಿದೆ (ಸೂರ್ಯ ಆತ್ಮಾ ಜಗತಸ್ತಸ್ಥುಷಶ್ಚ). “ಷು ಪ್ರೇರಣೇ” ಎಂಬ ಧಾತು ನಿಷ್ಪನ್ನವಾದ ಸೂರ್ಯ ಶಬ್ದದ ಅರ್ಥವೇ ಸರ್ವ ಪ್ರೇರಕನೆಂದು. ಎಲ್ಲ ಜೀವರಾಶಿಗಳಲ್ಲಿ ಚೈತನ್ಯ ರೂಪದಿಂದಿರುವ ಪರಮಾತ್ಮ ತತ್ತ್ವವು ಬಾಹ್ಯ ಲೋಕದಲ್ಲಿ ಸೂರ್ಯ ರೂಪದಿಂದ ಕರ್ಮ ಪ್ರೇರಕವಾಗಿದೆ (ಸುವತಿ ಕರ್ಮಣಿ ಲೋಕಂ ಪ್ರೇರಯತೀತಿ ಸೂರ್ಯಃ). ವೇದಕಾಲದಾರಭ್ಯ ಇಂದಿನ ವರೆಗೂ ಬ್ರಹ್ಮನಿಷ್ಠರು ಮೂರು ಸಂಧ್ಯಾಕಾಲದಲ್ಲಿ ಈ ಪ್ರತ್ಯಕ್ಷ ದೇವನ ಅಂತರ್ಗತ ಹಿರಣ್ಮಯ ಪುರುಷ ಪರತತ್ತ್ವ ನಾರಾಯಣನನ್ನೇ ಗಾಯತ್ರೀಯಲ್ಲಿ ಧ್ಯಾನಿಸುತ್ತಾರೆ ಮತ್ತು  ಹೋಮಿಸುತ್ತಾರೆ.

ಯಾವ್ಯಾವ ದೇವತೆಗಳಿಂದ ಏನನ್ನು ಪ್ರಾರ್ಥಿಸಬೇಕು ಎಂಬುದನ್ನು ಹೇಳುವ ಒಂದು ಬಹಳ ಪ್ರಸಿದ್ಧವಾದ ಸುಭಾಶಿತವಿದೆ -
ಆರೋಗ್ಯಂ ಭಾಸ್ಕರಾದಿಚ್ಛೇದ್ ಧನಮಿಚ್ಛೇದ್ಧುತಾಶನಾತ್ |
ಈಶ್ವರಾಜ್ಞಾನಮಿಚ್ಛೇತ್ ಮೋಕ್ಷಮಿಚ್ಛೇಜ್ಜನಾರ್ದನಾತ್ ||

ಆರೋಗ್ಯವನ್ನು ಸೂರ್ಯನಿಂದ, ಧನವನ್ನು ಅಗ್ನಿದೇವನಿಂದ, ಜ್ಞಾನವನ್ನು ಸದಾಶಿವನಿಂದ ಮತ್ತು ಸಂಸಾರ ಬಂಧನದಿಂದ ಮೋಕ್ಷವನ್ನು ವಿಷ್ಣುವಿನಿಂದ ಇಚ್ಛಿಸಬೇಕು. (ಇವುಗಳನ್ನು ಪಡೆಯಲು ಆ ದೇವತೆಗಳನ್ನು ಪ್ರಾರ್ಥಿಸಬೇಕು, ಪೂಜಿಸಬೇಕು ಎಂದರ್ಥ.) ಅಗ್ನಿಯನ್ನು ಯಜ್ಞದಿಂದ, ಶಿವನನ್ನು ಅಭಿಷೇಕದಿಂದ, ವಿಷ್ಣುವನ್ನು ಅಲಂಕಾರ-ಅರ್ಚನೆಗಳಿಂದ ಪೂಜಿಸಬೇಕು. ಸೂರ್ಯನಿಗೆ ನಮಸ್ಕಾರವೇ ಅತ್ಯಂತ ಪ್ರಿಯವಾದ ಪೂಜೆ. ಆದುದರಿಂದಲೇ “ನಮಸ್ಕಾರಪ್ರಿಯೋ ಭಾನುಃ” ಸೂರ್ಯನು ನಮಸ್ಕಾರ ಪ್ರಿಯ.

ತ್ರಿಸಂಧ್ಯಮರ್ಚಯೇತ್ ಸೂರ್ಯಂ ಸ್ಮರೆದ್ ಭಕ್ತ್ಯಾ ತು ಯೋ ನರಃ |
ನ ಸ ಪಶ್ಯತಿ ದಾರಿದ್ರ್ಯಂ ಜನ್ಮಜನ್ಮನಿ ಚಾರ್ಜುನ ||

(ಶ್ರೀಕೃಷ್ಣನು ಅರ್ಜುನನಿಗೆ ಹೇಳಿದ ಮಾತು) ಹೇ ಅರ್ಜುನನೇ, ಯಾವ ಭಕ್ತನು ತ್ರಿಸಂಧ್ಯಾ ಕಾಲಗಳಲ್ಲಿ ಸೂರ್ಯನ ಅರ್ಚನೆ-ಸ್ಮರಣೆಯನ್ನು ಮಾಡುತ್ತಾನೋ, ಅವನು ಜನ್ಮ ಜನ್ಮಾಂತರಗಳಲ್ಲಿಯೂ ಸಹ ದಾರಿದ್ರ್ಯವನ್ನು ಹೊಂದುವುದಿಲ್ಲ.

ಸದಾಚಾರ ನಿಷ್ಠರಾದ ಬ್ರಾಹ್ಮಣರು ಇವತ್ತಿಗೂ ಮೂರು ಸಂಧ್ಯಾಕಾಲಗಳಲ್ಲಿ ಸೂರ್ಯನಿಗೆ ಅರ್ಘ್ಯ ಕೊಟ್ಟು ಗಾಯತ್ರಿಯನ್ನು ಜಪಿಸಿ ನಮಸ್ಕಾರ ಮಾಡುತ್ತಾರೆ. ಈ ಆಚರಣೆ ಪ್ರಾಚೀನಕಾಲದಿಂದ ಅನಾಚೂನವಾಗಿ ನಡೆದು ಬಂದಿದೆ. ನಮ್ಮ ಶಾಸ್ತ್ರಗಳು ಅನೇಕವಿಧವಾದ ಸೂರ್ಯ ನಮಸ್ಕಾರ ವಿಧಾನಗಳನ್ನು ಹೇಳಿವೆ. ವೇದಗಳಲ್ಲಿ ಸೌರಸೂಕ್ತ, ಅರುಣ ಪ್ರಶ್ನೆ, ಅಥರ್ವಣ ಸೂರ್ಯೋಪನಿಷತ್, ಚಾಕ್ಷುಷೋಪನಿಷತ್ ಮೊದಲಾದವುಗಳಲ್ಲಿ ಸೂರ್ಯ ಪ್ರಾರ್ಥನೆ ಬಂದಿದೆ. ಪುರಾಣ, ಆಗಮ ಗ್ರಂಥಗಳಲ್ಲಿಯೂ ಸಹ ಸೂರ್ಯನ ಪ್ರಾರ್ಥನೆಗಳು ಇವೆ.


ಪ್ರಸಕ್ತ ಶ್ರೀ ಆದಿತ್ಯ ಹೃದಯವು ಆದಿಕಾವ್ಯವಾದ ಶ್ರೀಮದ್‍ವಾಲ್ಮೀಕಿ ರಾಮಾಯಣದ ಯುದ್ಧಕಾಂಡದ ಭಾಗ. ಯುದ್ಧ ನಡೆಯುತ್ತಿರುವಾಗ ಶ್ರೀರಾಮನಿಗೆ ಅಗಸ್ತ್ಯ ಮಹರ್ಷಿಗಳು ಉಪದೇಶಿಸಿದ ಮಾಹಾಮಹಿಮವಾದ ಸ್ತೋತ್ರವಿದು. ಯುದ್ದದಲ್ಲಿ ಬಹಳವಾಗಿ ಬಳಲಿದಂತಹ ರಾವಣನು ಮತ್ತೆ ತನ್ನ ಶಕ್ತಿಸಂಗ್ರಹ ಮಾಡಿಕೊಂಡು ರಾಮನ ಮುಂದೆ ಬಂದು ನಿಲ್ಲುತ್ತಾನೆ. ಸಾಕ್ಷಾತ್ ಶ್ರೀಮನ್ನಾರಾಯಣನೇ ಆದ ಶ್ರೀರಾಮನು ತಾನೂ ಸಹ ಯುದ್ಧದಿಂದ ಚಿಂತಿತನಾದವನಂತೆ ವ್ಯಥೆ ಪಡುತ್ತಿರಲು, ದೇವತೆಗಳ ಸಹಿತ ಯುದ್ಧ ನಿರೀಕ್ಷಣೆಗಾಗಿ ಬಂದಿದ್ದ ಅಗಸ್ತ್ಯ ಮಹರ್ಷಿಗಳು ರಾಮನನ್ನು ಕುರಿತು – ಹೇ ಮಹಾಬಾಹುವಾದ ರಾಮನೇ ನಿನಗೆ ಸನಾತನವಾದ ರಹಸ್ಯವೊಂದನ್ನು ಹೇಳುವೆನು ಕೇಳು, ಇದರಿಂದ ಎಲ್ಲಾ ಶತ್ರುಗಳನ್ನೂ ಯುದ್ಧದಲ್ಲಿ ಗೆಲ್ಲುವೆ.

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ ||

ಆದಿತ್ಯಹೃದಯವೆಂಬ ಪರಮ ಪುಣ್ಯಕರವಾದ, ಸರ್ವ ಶತ್ರುಗಳನ್ನೂ ನಾಶಗೊಳಿಸುವ, ಅಕ್ಷಯ ಫಲಪ್ರದವಾಗಿರುವ ಪರಮಪಾವನವಾದ ಜಯವನ್ನುಂಟುಮಾಡುವಂತಹ ಈ ಆದಿತ್ಯಹೃದಯವನ್ನು ಜಯಾಪೇಕ್ಷಿಗಳು ಸದಾ ಜಪಿಸಬೇಕು.
ಸರ್ವಮಂಗಲಮಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಂ ಆಯುರ್ವರ್ಧನಮುತ್ತಮಮ್ ||

ಎಲ್ಲಾ ಮಂಗಳಗಳಿಗೂ ಮಂಗಳಕರವಾದ, ಎಲ್ಲಾ ಪಾಪಗಳನ್ನೂ ನಾಶಗೊಳಿಸುವ, ಚಿಂತೆ-ದುಃಖಗಳನ್ನು ಪರಿಹರಿಸುವ, ಆಯುಷ್ಯಾಭಿವೃದ್ಧಿಕರವಾದ ಉತ್ತಮಫಲಪ್ರದವಾದ ಸ್ತೋತ್ರವು ಇದಾಗಿದೆ.

ಈ ಸ್ತೋತ್ರದಲ್ಲಿ ಸೂರ್ಯನನ್ನು ಅನೇಕ ಅದ್ಭುತ ಮತ್ತು ರಹಸ್ಯನಾಮಗಳಿಂದ ಸ್ತುತಿಸಲಾಗಿದೆ. ವಿಶ್ವದ ಒಳಗೂ ಹೊರಗೂ ನಿಯಾಮಕ ಶಕ್ತಿಯಾದ ಸೂರ್ಯನ ತೇಜಸ್ಸನ್ನು ಸುಂದರವಾಗಿ ವರ್ಣಿಸಲಾಗಿದೆ.
ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ ||

ವೇದಗಳೂ ರವಿಯೇ, ಯಜ್ಞಗಳೂ ರವಿಯೇ, ಯಜ್ಞಗಳ ಫಲವೂ ಸಹ ರವಿಯೇ. ಅಷ್ಟೇ ಅಲ್ಲದೇ ಈ ಕೋಕದಲ್ಲಿ ನಡೆಯುವ ಎಲ್ಲ ಸಾತ್ವಿಕ ಶುಭಕರ್ಮಗಳಿವೆಯೋ ಅವೆಲ್ಲವೂ ರವಿಯ ಸ್ವರೂಪವೇ ಆಗಿವೆ.
ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿದ್ ನಾವಸೀದತಿ ರಾಘವ ||

ಆಪತ್ತುಗಳು ಉಂಟಾದಾಗ, ಕಷ್ಟಗಳು ಬಂದಾಗ, ಏಕಾಂತದಲ್ಲಿರುವಾಗ, ಭಯವುಂಟಾದಾಗ ಯಾರು ಈ ಆದಿತ್ಯನನ್ನು ಸ್ಮರಿಸುತ್ತಾನೋ ಅಂಥವನು ಎಂದೆಂದಿಗೂ ವಿಷಾದವನ್ನು ಹೋಂದುವುದಿಲ್ಲ.

ಪರಾಶರ ಹೋರಾಶಾಸ್ತ್ರದಲ್ಲಿ “ಶ್ರೀರಾಮೋಽತಾರಃ ಸೂರ್ಯಸ್ಯ” ಶ್ರೀರಾಮನೇ ಸೂರ್ಯನಾರಾಯಣ ಎಂದು ಹೇಳಲಾಗಿದೆ. ಸ್ವತಃ ಪರಮಾತ್ಮನಾದ ಸೂರ್ಯವಂಶಿಯಾದ ಶ್ರೀರಾಮನು ತನ್ನದೇ ವಿಭೂತಿರೂಪನಾದ ಸೂರ್ಯನನ್ನು ಆದಿತ್ಯ ಹೃದಯದಿಂದ ಪ್ರಾರ್ಥಿಸಿ ಶತ್ರುಗಳ ಸಂಹಾರವನ್ನು ಮಾಡಿದನು. ಈ ಪ್ರಸಂಗವು ಆದಿತ್ಯ ಹೃದಯವೆಂಬ ದಿವ್ಯ ಸ್ತೋತ್ರಕ್ಕೆ ಮಹತ್ವವನ್ನು ತಂದುಕೊಡಲು ಮತ್ತು ಸೂರ್ಯಾಂತರ್ಗತವಾದ ತನ್ನ ಸ್ವರೂಪವನ್ನು ಪ್ರಕಟಪಡಿಸಲು ಶ್ರೀರಾಮಚಂದ್ರನು ಮಾಡಿದ ಲೀಲೆ ಮಾತ್ರ.

ಅನಾರೋಗ್ಯದಿಂದ ಬಳಲುವವರಿಗೆ ಅದರಲ್ಲೂ ಹೃದಯರೋಗ, ಕಣ್ಣಿನ ಸಮಸ್ಯೆಗಳು, ರಕ್ತದ ಸಮಸ್ಯೆಗಳು, ರಕ್ತದೊತ್ತಡ, ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು, ಖಿನ್ನತೆ ಮೊದಲಾದ ಮಾನಸಿಕ ರೋಗಗಳು, ಅಧೈರ್ಯ, ಅಂಜಿಕೆ ಮೊದಲಾದ ಅನೇಕ ಶಾರಿರಿಕ ಮತ್ತು ಮಾನಸಿಕ ರೋಗಗಳಿಗೆ ಸೂರ್ಯಾರಾಧನೆಯಿಂದ ಸಮಾಧಾನ ದೊರೆಯುತ್ತದೆ. ಮಂತ್ರಗಳು ಔಷಧಗಳ ಬಲವನ್ನು ಹೆಚ್ಚಿಸಲು ಸಹಾಯಕವಾಗಿರುತ್ತವೆ. ಸರ್ವ ಜಯಪ್ರದವೂ, ಆಯುಷ್ಯ ವರ್ಧಕವೂ, ಆರೋಗ್ಯ ಪ್ರದವೂ, ಸಕಲ ಕಾರ್ಯಸಾಧವೂ ಆದ ಆದಿತ್ಯ ಹೃದಯದ ಪಾರಾಯಣಗಳನ್ನು ಮಾಡಿ ಶ್ರೀಸೂರ್ಯನಾರಾಯಣನ ಅನುಗ್ರಹವನ್ನು ಪಡೆಯೋಣ. (ವಾಚಕರ ಅನುಕೂಲಕ್ಕಾಗಿ ಈ ಸ್ತೋತ್ರದ ಪಿಡಿಎಫ಼್ ಆವೃತ್ತಿಯನ್ನು ಸಹ ಲೇಖನದ ಕೊನೆಗೆ ಕೊಡಲಾಗಿದೆ.)

ಆದಿತ್ಯಹೃದಯಮ್

ತತೋ ಯುದ್ಧಪರಿಶ್ರಾಂತಂ ಸಮರೇ ಚಿಂತಯಾ ಸ್ಥಿತಮ್ |
ರಾವಣಂ ಚಾಗ್ರತೋ ದೃಷ್ಟ್ವಾ ಯುದ್ಧಾಯ ಸಮುಪಸ್ಥಿತಮ್ || ೧ ||

ದೈವತೈಶ್ಚ ಸಮಾಗಮ್ಯ ದ್ರಷ್ಟುಮಭ್ಯಾಗತೋ ರಣಮ್ |
ಉಪಾಗಮ್ಯಾಬ್ರವೀದ್ ರಾಮಮ್ ಅಗಸ್ತ್ಯೋ ಭಗವಾನ್‍ಋಷಿಃ || ೨ ||

ರಾಮ ರಾಮ ಮಹಾಬಾಹೋ ಶೃಣು ಗುಹ್ಯಂ ಸನಾತನಮ್ |
ಯೇನ ಸರ್ವಾನರೀನ್ ವತ್ಸ ಸಮರೇ ವಿಜಯಿಷ್ಯಸಿ || ೩ ||

ಆದಿತ್ಯಹೃದಯಂ ಪುಣ್ಯಂ ಸರ್ವಶತ್ರುವಿನಾಶನಮ್ |
ಜಯಾವಹಂ ಜಪೇನ್ನಿತ್ಯಂ ಅಕ್ಷಯ್ಯಂ ಪರಮಂ ಶಿವಮ್ || ೪ ||

ಸರ್ವಮಂಗಲಮಂಗಲ್ಯಂ ಸರ್ವಪಾಪಪ್ರಣಾಶನಮ್ |
ಚಿಂತಾಶೋಕಪ್ರಶಮನಂ ಆಯುರ್ವರ್ಧನಮುತ್ತಮಮ್ || ೫ ||

ರಶ್ಮಿಮಂತಂ ಸಮುದ್ಯಂತಂ ದೇವಾಸುರನಮಸ್ಕೃತಮ್ |
ಪೂಜಯಸ್ವ ವಿವಸ್ವಂತಂ ಭಾಸ್ಕರಂ ಭುವನೇಶ್ವರಮ್ || ೬ ||

ಸರ್ವದೇವಾತ್ಮಕೋ ಹ್ಯೇಷಃ ತೇಜಸ್ವೀ ರಶ್ಮಿಭಾವನಃ |
ಏಷ ದೇವಾಸುರಗಣಾನ್ ಲೋಕಾನ್ ಪಾತಿ ಗಭಸ್ತಿಭಿಃ || ೭ ||

ಏಷ ಬ್ರಹ್ಮಾ ಚ ವಿಷ್ಣುಶ್ಚ ಶಿವಃ ಸ್ಕಂದಃ ಪ್ರಜಾಪತಿಃ |
ಮಹೇಂದ್ರೋ ಧನದಃ ಕಾಲೋ ಯಮಃ ಸೋಮೋ ಹ್ಯಪಾಂಪತಿಃ || ೮ ||

ಪಿತರೋ ವಸವಃ ಸಾಧ್ಯಾ ಅಶ್ವಿನೌ ಮರುತೋ ಮನುಃ |
ವಾಯುರ್‌ವಹ್ನಿಃ ಪ್ರಜಾ ಪ್ರಾಣ ಋತುಕರ್ತಾ ಪ್ರಭಾಕರಃ || ೯ ||

ಆದಿತ್ಯಃ ಸವಿತಾ ಸೂರ್ಯಃ ಖಗಃ ಪೂಷಾ ಗಭಸ್ತಿಮಾನ್ |
ಸುವರ್ಣಸದೃಶೋ ಭಾನುಃ ಸ್ವರ್ಣರೇತಾ ದಿವಾಕರಃ || ೧೦ ||

ಹರಿದಶ್ವಃ ಸಹಸ್ರಾರ್ಚಿಃ ಸಪ್ತಸಪ್ತಿರ್ಮರೀಚಿಮಾನ್ |
ತಿಮಿರೋನ್‍ಮಥನಃ ಶಂಭುಸ್ತ್ವಷ್ಟಾ ಮಾರ್ತಾಂಡ ಅಂಶುಮಾನ್ || ೧೧ ||

ಹಿರಣ್ಯಗರ್ಭಃ ಶಿಶಿರಃ ತಪನೋ ಭಾಸ್ಕರೋ ರವಿಃ |
ಅಗ್ನಿಗರ್ಭೋಽದಿತೇಃ ಪುತ್ರಃ ಶಂಖಃ ಶಿಶಿರನಾಶನಃ || ೧೨ ||

ವ್ಯೋಮನಾಥಸ್ತಮೋಭೇದೀ ಋಗ್ಯಜುಃಸಾಮಪಾರಗಃ |
ಘನವೃಷ್ಟಿರಪಾಂ ಮಿತ್ರೋ ವಿಂಧ್ಯವೀಥೀ ಪ್ಲವಂಗಮಃ || ೧೩ ||

ಆತಪೀ ಮಂಡಲೀ ಮೃತ್ಯುಃ ಪಿಂಗಲಃ ಸರ್ವತಾಪನಃ |
ಕವಿರ್ವಿಶ್ವೋ ಮಹಾತೇಜಾಃ ರಕ್ತಃ ಸರ್ವಭವೋದ್‍ಭವಃ || ೧೪ ||

ನಕ್ಷತ್ರಗ್ರಹತಾರಾಣಾಮಧಿಪೋ ವಿಶ್ವಭಾವನಃ |
ತೇಜಸಾಮಪಿ ತೇಜಸ್ವೀ ದ್ವಾದಶಾತ್ಮನ್ ನಮೋಽಸ್ತು ತೇ || ೧೫ ||

ನಮಃ ಪೂರ್ವಾಯ ಗಿರಯೇ ಪಶ್ಚಿಮಾಯಾದ್ರಯೇ ನಮಃ |
ಜ್ಯೋತಿರ್ಗಣಾನಾಂ ಪತಯೇ ದಿನಾಧಿಪತಯೇ ನಮಃ || ೧೬ ||

ಜಯಾಯ ಜಯಭದ್ರಾಯ ಹರ್ಯಶ್ವಾಯ ನಮೋ ನಮಃ |
ನಮೋ ನಮಃ ಸಹಸ್ರಾಂಶೋ ಆದಿತ್ಯಾಯ ನಮೋ ನಮಃ || ೧೭ ||

ನಮಃ ಉಗ್ರಾಯ ವೀರಾಯ ಸಾರಂಗಾಯ ನಮೋ ನಮಃ |
ನಮಃ ಪದ್ಮಪ್ರಬೋಧಾಯ ಮಾರ್ತಾಂಡಾಯ ನಮೋ ನಮಃ || ೧೮ ||

ಬ್ರಹ್ಮೇಶಾನಾಚ್ಯುತೇಶಾಯ ಸೂರ್ಯಾಯಾದಿತ್ಯವರ್ಚಸೇ |
ಭಾಸ್ವತೇ ಸರ್ವಭಕ್ಷಾಯ ರೌದ್ರಾಯ ವಪುಷೇ ನಮಃ || ೧೯ ||

ತಮೋಘ್ನಾಯ ಹಿಮಘ್ನಾಯ ಶತ್ರುಘ್ನಾಯಾಮಿತಾತ್ಮನೇ |
ಕೃತಘ್ನಘ್ನಾಯ ದೇವಾಯ ಜ್ಯೋತಿಷಾಂ ಪತಯೇ ನಮಃ || ೨೦ ||

ತಪ್ತಚಾಮೀಕರಾಭಾಯ ವಹ್ನಯೇ ವಿಶ್ವಕರ್ಮಣೇ |
ನಮಸ್ತಮೋಭಿನಿಘ್ನಾಯ ರವಯೇ ಲೋಕಸಾಕ್ಷಿಣೇ || ೨೧ ||

ನಾಶಯತ್ಯೇಷ ವೈ ಭೂತಂ ತದೇವ ಸೃಜತಿ ಪ್ರಭುಃ |
ಪಾಯತ್ಯೇಷ ತಪತ್ಯೇಷ ವರ್ಷತ್ಯೇಷ ಗಭಸ್ತಿಭಿಃ || ೨೨ ||

ಏಷ ಸುಪ್ತೇಷು ಜಾಗರ್ತಿ ಭೂತೇಷು ಪರಿನಿಷ್ಠಿತಃ |
ಏಷ ಏವಾಗ್ನಿಹೋತ್ರಂ ಚ ಫಲಂ ಚೈವಾಗ್ನಿಹೋತ್ರಿಣಾಮ್ || ೨೩ ||

ವೇದಾಶ್ಚ ಕ್ರತವಶ್ಚೈವ ಕ್ರತೂನಾಂ ಫಲಮೇವ ಚ |
ಯಾನಿ ಕೃತ್ಯಾನಿ ಲೋಕೇಷು ಸರ್ವ ಏಷ ರವಿಃ ಪ್ರಭುಃ || ೨೪ ||

ಏನಮಾಪತ್ಸು ಕೃಚ್ಛ್ರೇಷು ಕಾಂತಾರೇಷು ಭಯೇಷು ಚ |
ಕೀರ್ತಯನ್ ಪುರುಷಃ ಕಶ್ಚಿದ್ ನಾವಸೀದತಿ ರಾಘವ || ೨೫ ||

ಪೂಜಯಸ್ವೈನಮೇಕಾಗ್ರೋ ದೇವದೇವಂ ಜಗತ್ಪತಿಮ್ |
ಏತತ್ ತ್ರಿಗುಣಿತಂ ಜಪ್ತ್ವಾ ಯುದ್ಧೇಷು ವಿಜಯಿಷ್ಯಸಿ || ೨೬ ||

ಅಸ್ಮಿನ್ ಕ್ಷಣೇ ಮಹಾಬಾಹೋ ರಾವಣಂ ತ್ವಂ ವಧಿಷ್ಯಸಿ |
ಏವಮುಕ್ತ್ವಾ ತದಾಽಗಸ್ತ್ಯೋ ಜಗಾಮ ಚ ಯಥಾಗತಮ್ || ೨೭ ||

ಏತಚ್ಛ್ರುತ್ವಾ ಮಹಾತೇಜಾಃ ನಷ್ಟಶೋಕೋಽಭವತ್ತದಾ |
ಧಾರಯಾಮಾಸ ಸುಪ್ರೀತೋ ರಾಘವಃ ಪ್ರಯತಾತ್ಮವಾನ್ || ೨೮ ||

ಆದಿತ್ಯಂ ಪ್ರೇಕ್ಷ್ಯ ಜಪ್ತ್ವಾ ತು ಪರಂ ಹರ್ಷಮವಾಪ್ತವಾನ್ |
ತ್ರಿರಾಚಮ್ಯ ಶುಚಿರ್ಭೂತ್ವಾ ಧನುರಾದಾಯ ವೀರ್ಯವಾನ್ || ೨೯ ||

ರಾವಣಂ ಪ್ರೇಕ್ಷ್ಯ ಹೃಷ್ಟಾತ್ಮಾ ಯುದ್ಧಾಯ ಸಮುಪಾಗಮತ್ |
ಸರ್ವಯತ್ನೇನ ಮಹತಾ ವಧೇ ತಸ್ಯ ಧೃತೋಽಭವತ್ || ೩೦ ||

ಅಥ ರವಿರವದನ್ನಿರೀಕ್ಷ್ಯ ರಾಮಂ
ಮುದಿತಮನಾಃ ಪರಮಂ ಪ್ರಹೃಷ್ಯಮಾಣಃ |
ನಿಶಿಚರಪತಿಸಂಕ್ಷಯಂ ವಿದಿತ್ವಾ
ಸುರಗಣಮಧ್ಯಗತೋ ವಚಸ್ತ್ವರೇತಿ || ೩೧ ||

|| ಇತಿ ಶ್ರೀಮದ್ರಾಮಾಯಣೇ ಯುದ್ಧಕಾಂಡೇ ಆದಿತ್ಯಹೃದಯಂ ನಾಮ ಸಪ್ತೋತ್ತರಶತತಮಃ ಸರ್ಗಃ ||

(ಪಿಡಿಎಫ಼್ ಆವೃತ್ತಿ)

ಶನೈಶ್ಚರ ವಿರಚಿತ ಶ್ರೀಲಕ್ಷ್ಮೀನರಸಿಂಹ ಸ್ತೋತ್ರ

ಗ್ರಹ ಗೋಚಾರ ಪೀಡೆಗಳಲ್ಲಿ ಶನೈಶ್ಚರ ಗೋಚಾರ ಕಷ್ಟಕರವಾದದ್ದು. ಶನಿಗ್ರಹ ಹೆಸರು ಕೇಳುತ್ತಲೆ ಜನರು ಭಯಪಡುತ್ತಾರೆ. ಜ್ಯೋತಿಷಿಗಳು ಶನಿಕಾಟವು ಸದವಕಾಶವೇನೋ ಎಂಬಂತೆ ಜನರನ್ನು ಮತ್ತಿಷ್ಟು ಹೆದರಿಸುತ್ತಿರುತ್ತಾರೆ. ಜನ ವಿಶ್ವಾಸ-ಅಂಧವಿಶ್ವಾಸ, ಭಯ, ಬೆದರಿಕೆ, ಅಜ್ಞಾನ ಮುಂತಾದವುಗಳ ಪ್ರಭಾವಕ್ಕೊಳಗಾಗಿ ಕಂಗಾಲಾಗುತ್ತಾರೆ. ಶನಿದೇವನು ನಮ್ಮ ಜಾತಕದಲ್ಲಿ ಮತ್ತು ಗೋಚಾರದಲ್ಲಿ ಅನೇಕ ವಿಷಯಗಳ ಕಾರಕನಾಗಿರುತ್ತಾನೆ. ಶನೈಶ್ಚರನು ಕರ್ಮಫಲದಾಯಕನಾಗಿರುತ್ತಾನೆ. ಪ್ರತಿಯೊಬ್ಬ ಜೀವನು ತಾನು ಮಾಡಿರುವ ಶುಭಾಶುಭ ಕರ್ಮದ ಫಲಗಳನ್ನು ಭೋಗಿಸಿಯೇ ತೀರಿಸಬೇಕು. ಶನಿದಶೆ, ಶನಿಗೋಚಾರಗಳು ನಮ್ಮ ಕರ್ಮಪ್ರಾರಬ್ಧವನ್ನು ಭೋಗಿಸಲು ವಿಧಿಯಿಂದ ನಿರ್ಮಿತ ವ್ಯವಸ್ಥೆಯಾಗಿದೆ. ಎಲ್ಲ ಗ್ರಹಗಳ ತುಲನೆಯಲ್ಲಿ ಶನಿಯ ಗತಿಯು ಬಹಳ ಮಂದವಾಗಿರುತ್ತದೆ, ಆದ್ದರಿಂದ ಪ್ರಭಾವದ ಕಾಲವ್ಯಾಪ್ತಿಯೂ ಹೆಚ್ಚಿನದಾಗಿರುತ್ತದೆ. ಹನ್ನೆರಡು ರಾಶಿಗಳನ್ನು ಪೂರ್ಣವಾಗಿ ಸಂಚರಿಸಲು ಶನಿಗೆ ಅಂದಾಜು ಇಪ್ಪತ್ತೊಂಬತ್ತುವರೆ ವರ್ಷಗಳಷ್ಟು ಕಾಲ ಬೇಕು. ಒಂದು ರಾಶಿಯಲ್ಲಿ ಶನಿಸಂಚಾರ ಎರಡುವರೆ ವರ್ಷಗಳಷ್ಟು ಇರುತ್ತದೆ. ಈ ದೀರ್ಘ ಅವಧಿಯಿಂದಾಗಿಯೇ ಶನಿಪ್ರಭಾವವೂ ಸಹ ದ್ವಾದಶರಾಶಿಗಳ ಮೇಲೆ ದೀರ್ಘಕಾಲದವರೆಗೆ ಇರುತ್ತದೆ.

ಶನಿ ಗೋಚಾರದಲ್ಲಿ ದ್ವಾದಶ, ಅಷ್ಟಮ, ಪಂಚಮ ಮತ್ತು ಚತುರ್ಥ ಗೋಚಾರಗಳು ವಿಪತ್ತಿಕಾರಕಗಳೆಂದು ಮಾನಿಸಲಾಗಿದೆ. ಜನ್ಮರಾಶಿಯಿಂದ ದ್ವಾದಶ-ಜನ್ಮ-ದ್ವಿತೀಯ ಹೀಗೆ ಏಳುವರೆ ವರ್ಷಗಳ ಗೋಚಾರವನ್ನು ಸಾಡೆಸಾತಿ ಅಥವಾ ಏಳರಾಟ ಶನಿಪೀಡೆಯೆಂದು ಕರೆಯಲಾಗಿದೆ. ಜನ್ಮರಾಶಿಯಿಂದ ಚತುರ್ಥದಲ್ಲಿ ಶನಿ ಗೋಚಾರವನ್ನು ಕಂಟಕ ಶನಿಯೆಂದು ಕರೆಯುತ್ತಾರೆ. (ಶನಿ ಗೋಚಾರದ ಹೆಚ್ಚಿನ ಮಾಹಿತಿಗಳನ್ನು ಮುಂದೆ ದೀರ್ಘವಾಗಿ ಬರೆಯಲಿದ್ದೇನೆ.)

ಅಶುಭ ಸ್ಥಾನದಲ್ಲಿ ಶನಿ ಗೋಚಾರಕಾಲದಲ್ಲಿ ಪೀಡಾಪರಿಹಾರಕ್ಕಾಗಿ ಅನೇಕ ದೈವೋಪಾಯಗಳನ್ನು ಸೂಚಿಸಲಾಗಿದೆ. ಜಪ, ದಾನ, ಹೋಮ, ಪಾರಾಯಣ ಮೊದಲಾದ ಶಾಂತಿಕರ್ಮಗಳು ಬಹಳಷ್ಟು ಪ್ರಭಾವಶಾಲಿಯಾಗಿರುತ್ತವೆ. ಇಂತಹ ಅತ್ಯಂತ ಪ್ರಭಾವಶಾಲೀ ಉಪಾಯಗಳಲ್ಲಿ ಸ್ವತಃ ಶನಿದೇವನೇ ರಚಿಸಿರುವ ನರಸಿಂಹದೇವರ ಪ್ರಾರ್ಥನಾರೂಪವಾದ ಸ್ತೋತ್ರವು ಸಹ ಒಂದು. ಸುಂದರವಾದ ಈ ಸ್ತೋತ್ರವು ಭವಿಷ್ಯೋತ್ತರ ಪುರಾಣದಲ್ಲಿ ಶ್ರೀಕೃಷ್ಣನಿಂದ ಯುಧಿಷ್ಟಿರನಿಗೆ ಹೇಳಲ್ಪಟ್ಟಿದೆ. ಸ್ವತಃ ಶನಿದೇವನಿಂದ ವಿರಚಿತವಾದ ಶ್ರೀನರಸಿಂಹ ದೇವರಿಂದ ಅನುಗ್ರಹೀತವಾದ ಮತ್ತು ಶ್ರೀಕೃಷ್ಣನಿಂದ ಮಾನಿಸಲ್ಪಟ್ಟ ಮತ್ತು ಪುನಃ ಉಪದೇಶಿಸಲ್ಪಟ್ಟ ಸ್ತೋತ್ರವಿದು. ಅದುದರಿಂದ ಈ ಸ್ತೋತ್ರದ ಮಹತ್ವವು ಅನನ್ಯಸಾಧಾರಣವಾದದ್ದು. ಈ ಸ್ತೋತ್ರಪ್ರಭಾವದ ಅನುಭವವು ಅನೇಕರಿಗೆ ಆಗಿರುತ್ತದೆ.

ಶನಿದೇವನು ಶ್ರೀನರಸಿಂಹ ಸ್ವಾಮಿಯನ್ನು ಪ್ರಾರ್ಥಿಸುತ್ತ ಬೇಡಿಕೊಳ್ಳುತ್ತಾನೆ-

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿಕರಸ್ಸ್ಯಾದ್ದೇವತಾಪತೇ ||
ಮತ್‍ಕೃತಂ ತ್ವತ್‍ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ |
ಸರ್ವಾನ್ ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ ||


ದಯಾನಿಧಿಯಾದ ಹೇ ನರಸಿಂಹದೇವನೇ ನನ್ನ ಮೇಲೆ ಕೃಪೆಯನ್ನು ಮಾಡು, ದೇವತೆಗಳ ಒಡೆಯನೇ ನನ್ನ ವಾರವಾದ ಶನಿವಾರ ನಿನಗೆ ಪ್ರೀತಿಕರವಾಗಲಿ. ನನ್ನಿಂದ ಮಾಡಲ್ಪಟ್ಟ ನಿನ್ನ ಪರವಾದ ಸ್ತೋತ್ರವನ್ನು ಪಠಿಸುವವರು ಮತ್ತು ಶ್ರವಣಮಾಡುವವರ ಎಲ್ಲ ಮನೋಕಾಮನೆಗಳನ್ನು ಲೋಕರಕ್ಷಕನಾದ ನರಸಿಂಹನೇ ನೀನು ಪೂರ್ಣಮಾಡು.

ಪ್ರಾರ್ಥನೆಯಿಂದ ಪ್ರಸನ್ನನಾದ ಶ್ರೀನರಸಿಂಹದೇವನು ಶನಿದೇವನ ಮೇಲೆ ಅನುಗ್ರಹ ಮಾಡುತ್ತಾ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ |
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು ||
ತ್ವತ್‍ಕೃತಂ ಮತ್‍ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ |
ದ್ವಾದಶಾಷ್ಟಮಜನ್ಮಸ್ಥಾತ್‍ತ್ವದ್ಭಯಂ ಮಾಸ್ತು ತಸ್ಯ ವೈ || 


ಹೇ ಶನಿದೇವನೇ ತಥಾಸ್ತು, ನಿನ್ನ ಪ್ರಾರ್ಥನೆಯಂತೆಯೇ ಆಗಲಿ. ನಾನು ಎಲ್ಲ ಭಕ್ತರ ಕಾಮನೆಗಳನ್ನು ಪೂರೈಸುತ್ತೇನೆ, ಅಲ್ಲದೇ ನನ್ನ ಒಂದು ಮಾತನ್ನು ಸಹ ಕೇಳು. ನಿನ್ನಿಂದ ರಚಿತವಾದ ನನ್ನ ಸ್ತುತಿರೂಪವಾದ ಸ್ತೋತ್ರವನ್ನು ಯಾರು ಪಠಿಸುತ್ತಾರೋ ಮತ್ತು ಕೇಳುತ್ತಾರೋ ಅವರಿಗೆ ದ್ವಾದಶ-ಅಷ್ಟಮ-ಜನ್ಮಸ್ಥಾನಗಳಲ್ಲಿ ನಿನ್ನ ಗೋಚಾರನಿಮಿತ್ತವಾದ ಭಯವು (ಆಪತ್ತು) ಉಂಟಾಗದಿರಲಿ.

ಹೀಗೆ ಪ್ರಭಾವಶಾಲಿಯಾದ ಮಹಿಮಾನ್ವಿತವಾದ ಪೀಡಾಪರಿಹಾರಕವಾದ ಶ್ರೀಶನಿದೇವನಿಂದ ವಿರಚಿತವಾದ ಶ್ರೀಲಕ್ಷ್ಮೀನೃಸಿಂಹ ಸ್ತೋತ್ರವನ್ನು ಪ್ರತಿನಿತ್ಯ ಪಠಿಸಿ ಎಲ್ಲ ಕಷ್ಟಗಳಿಂದ ಮುಕ್ತರಾಗೋಣ. (ವಾಚಕರ ಅನುಕೂಲಕ್ಕಾಗಿ ಈ ಸ್ತೋತ್ರದ ಪಿಡಿಎಫ಼್ ಆವೃತ್ತಿಯನ್ನು ಸಹ ಕೊಟ್ಟಿರುತ್ತೇನೆ. ಡೌನ್‍ಲೋಡ್ ಲಿಂಕನ್ನು ಸ್ತೋತ್ರದ ಕೊನೆಗೆ ಕೊಡಲಾಗಿದೆ.)


ಶನೈಶ್ಚರಕೃತಾ ಶ್ರೀಲಕ್ಷ್ಮೀನೃಸಿಂಹಸ್ತೋತ್ರಮ್

ಶ್ರೀಕೃಷ್ಣ ಉವಾಚ –

ಸುಲಭೋ ಭಕ್ತಿಯುಕ್ತಾನಾಂ ದುರ್ದರ್ಶೋ ದುಷ್ಟಚೇತಸಾಮ್ |
ಅನನ್ಯಗತಿಕಾನಾಂ ಚ ಪ್ರಭುರ್ಭಕ್ತೈಕವತ್ಸಲಃ || ೧ ||

ಶನೈಶ್ಚರಸ್ತತ್ರ ನೃಸಿಂಹದೇವಸ್ತುತಿಂ ಚಕಾರಾಽಮಲಚಿತ್ತವೃತ್ತಿಃ |
ಪ್ರಣಮ್ಯ ಸಾಷ್ಟಾಂಗಮಶೇಷಲೋಕಕಿರೀಟನೀರಾಜಿತಪಾದಪದ್ಮಮ್ || ೨ ||

ಶ್ರೀಶನಿರುವಾಚ –

ಯತ್ಪಾದಪಂಕಜರಜಃ ಪರಮಾದರೇಣ
ಸಂಸೇವಿತಂ ಸಕಲಕಲ್ಮಷರಾಶಿನಾಶಮ್ |
ಕಲ್ಯಾಣಕಾರಕಮಶೇಷನಿಜಾನುಗಾನಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೩ ||

ಸರ್ವತ್ರ ಚಂಚಲತಯಾ ಸ್ಥಿತಯಾ ಹಿ ಲಕ್ಷ್ಮ್ಯಾ
ಬ್ರಹ್ಮಾದಿವಂದ್ಯಪದಯಾ ಸ್ಥಿರಯಾ ನ್ಯಸೇವಿ |
ಪಾದಾರವಿಂದಯುಗಲಂ ಪರಮಾದರೇಣ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೪ ||

ಯದ್ರೂಪಮಾಗಮಶಿರಃ ಪ್ರತಿಪಾದ್ಯಮಾದ್ಯ-
ಮಾಧ್ಯಾತ್ಮಿಕಾದಿಪರಿತಾಪಹರಂ ವಿಚಿಂತ್ಯಮ್ |
ಯೋಗೀಶ್ವರೈರಪಗತಾಽಖಿಲದೋಷಸಂಘೈಃ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೫ ||

ಪ್ರಹ್ಲಾದಭಕ್ತವಚಸಾ ಹರಿರಾವಿರಾಸ
ಸ್ತಂಭೇ ಹಿರಣ್ಯಕಶಿಪುಂ ಯ ಉದಾರಭಾವಃ |
ಊರ್ವೋರ್‌ನಿಧಾಯ ತದುದರೋ ನಖರೈರ್‌ದದಾರ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೬ ||

ಯೋ ನೈಜಭಕ್ತಮನಲಾಂಬುಧಿಭೂಧರೋಗ್ರ-
ಶೃಂಗಪ್ರಪಾತವಿಷದಂತಿಸರೀಸೃಪೇಭ್ಯಃ |
ಸರ್ವಾತ್ಮಕಃ ಪರಮಕಾರುಣಿಕೋ ರರಕ್ಷ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೭ ||

ಯನ್ನಿರ್ವಿಕಾರಪರರೂಪವಿಚಿಂತನೇನ
ಯೋಗೀಶ್ವರಾ ವಿಷಯವೀತಸಮಸ್ತರಾಗಾಃ |
ವಿಶ್ರಾಂತಿಮಾಪುರವಿನಾಶವತೀಂ ಪರಾಖ್ಯಾಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೮ ||

ಯದ್ರೂಪಮುಗ್ರಪರಿಮರ್ದನಭಾವಶಾಲಿ
ಸಂಚಿಂತನೇನ ಸಕಲಾಘವಿನಾಶಕಾರಿ |
ಭೂತಜ್ವರಗ್ರಹಸಮುದ್ಭವಭೀತಿನಾಶಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೯ ||

ಯಸ್ಯೋತ್ತಮಂ ಯಶ ಉಮಾಪತಿಪದ್ಮಜನ್ಮ-
ಶಕ್ರಾದಿದೈವತಸಭಾಸು ಸಮಸ್ತಗೀತಮ್ |
ಶಕ್ತ್ಯೈವ ಸರ್ವಶಮಲಪ್ರಶಮೈಕದಕ್ಷಂ
ಸ ತ್ವಂ ನೃಸಿಂಹ ಮಯಿ ಧೇಹಿ ಕೃಪಾವಲೋಕಮ್ || ೧೦ ||

ಇತ್ಥಂ ಶ್ರುತ್ವಾ ಸ್ತುತಿಂ ದೇವಃ ಶನಿನಾ ಕಲ್ಪಿತಾಂ ಹರಿಃ |
ಉವಾಚ ಬ್ರಹ್ಮವೃಂದಸ್ಥಂ ಶನಿಂ ತಂ ಭಕ್ತವತ್ಸಲಃ || ೧೧ ||

ಶ್ರೀನೃಸಿಂಹ ಉವಾಚ –

ಪ್ರಸನ್ನೋಽಹಂ ಶನೇ ತುಭ್ಯಂ ವರಂ ವರಯ ಶೋಭನಮ್ |
ಯಂ ವಾಂಛಸಿ ತಮೇವ ತ್ವಂ ಸರ್ವಲೋಕಹಿತಾವಹಮ್ || ೧೨ ||

ಶ್ರೀಶನಿರುವಾಚ –

ನೃಸಿಂಹ ತ್ವಂ ಮಯಿ ಕೃಪಾಂ ಕುರು ದೇವ ದಯಾನಿಧೇ |
ಮದ್ವಾಸರಸ್ತವ ಪ್ರೀತಿಕರಸ್ಸ್ಯಾದ್ದೇವತಾಪತೇ || ೧೩ ||

ಮತ್‍ಕೃತಂ ತ್ವತ್‍ಪರಂ ಸ್ತೋತ್ರಂ ಶೃಣ್ವಂತಿ ಚ ಪಠಂತಿ ಚ |
ಸರ್ವಾನ್ ಕಾಮಾನ್ ಪೂರಯೇಥಾಃ ತೇಷಾಂ ತ್ವಂ ಲೋಕಭಾವನ || ೧೪ ||

ಶ್ರೀನೃಸಿಂಹ ಉವಾಚ –

ತಥೈವಾಸ್ತು ಶನೇಽಹಂ ವೈ ರಕ್ಷೋಭುವನಸಂಸ್ಥಿತಃ |
ಭಕ್ತಕಾಮಾನ್ ಪೂರಯಿಷ್ಯೇ ತ್ವಂ ಮಮೈಕಂ ವಚಃ ಶೃಣು || ೧೫ ||

ತ್ವತ್‍ಕೃತಂ ಮತ್‍ಪರಂ ಸ್ತೋತ್ರಂ ಯಃ ಪಠೇತ್ ಶೃಣುಯಾಚ್ಚ ಯಃ |
ದ್ವಾದಶಾಷ್ಟಮಜನ್ಮಸ್ಥಾತ್‍ತ್ವದ್ಭಯಂ ಮಾಸ್ತು ತಸ್ಯ ವೈ || ೧೬ ||

ಶನಿರ್ನರಹರಿಂ ದೇವಂ ತಥೇತಿ ಪ್ರತ್ಯುವಾಚ ಹ |
ತತಃ ಪರಮಸಂತುಷ್ಟಾಃ ಜಯೇತಿ ಮುನಯೋಽವದನ್ || ೧೭ ||

ಶ್ರೀಕೃಷ್ಣ ಉವಾಚ – (ಧರ್ಮರಾಜಂ ಪ್ರತಿ)

ಇತ್ಥಂ ಶನೈಶ್ಚರಸ್ಯಾಥ ನೃಸಿಂಹದೇವ-
ಸಂವಾದಮೇತತ್ ಸ್ತವನಂ ಚ ಮಾನವಃ |
ಶೃಣೋತಿ ಯಃ ಶ್ರಾವಯತೇ ಚ ಭಕ್ತ್ಯಾ
ಸರ್ವಾಣ್ಯಭೀಷ್ಟಾನಿ ಚ ವಿಂದತೇ ಧ್ರುವಮ್ || ೧೮ ||

|| ಇತಿ ಶ್ರೀಭವಿಷ್ಯೋತ್ತರಪುರಾಣೇ ರಕ್ಷೋಭುವನಮಾಹಾತ್ಮ್ಯೇ ಶ್ರೀಕೃಷ್ಣಯುಧಿಷ್ಠಿರಸಂವಾದೇ ಶನೈಶ್ಚರಕೃತಂ ನೃಸಿಂಹಸ್ತೋತ್ರಂ ಸಂಪೂರ್ಣಮ್ ||
|| ಶ್ರೀ ಕೃಷ್ಣಾರ್ಪಣಮಸ್ತು ||

ಪಿಡಿಎಫ್ ಆವೃತ್ತಿ